ನವದೆಹಲಿ: ಚೀನಾದ ಹಾಂಗ್ಝೌನಲ್ಲಿ ನಡೆದ ಪ್ಯಾರಾ ಏಷ್ಯನ್ ಕ್ರೀಡಾಕೂಟದ ಮಹಿಳೆಯರ ಆರ್ಚರಿಯಲ್ಲಿ ಚಿನ್ನ ಗೆದ್ದಿದ್ದ ಶೀತಲ್ ದೇವಿ ಮತ್ತು ಏಕದಿನ ವಿಶ್ವಕಪ್ ಕ್ರಿಕೆಟ್ನಲ್ಲಿ ಅಮೋಘ ಬೌಲಿಂಗ್ ಮಾಡಿದ್ದ ವೇಗಿ ಮೊಹಮ್ಮದ್ ಶಮಿ ಅವರಿಗೆ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಲಭಿಸಿದೆ.
ದೇಶದ ಅತ್ಯುನ್ನತ ಕ್ರೀಡಾಪ್ರಶಸ್ತಿಯಾದ ಖೇಲ್ ರತ್ನ ಗೌರವಕ್ಕೆ ಬ್ಯಾಡ್ಮಿಂಟನ್ ಜೋಡಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ಭಾಜನರಾಗಿದ್ದಾರೆ. ಕೇಂದ್ರ ಕ್ರೀಡಾ ಸಚಿವಾಲಯವು ಒಟ್ಟು 26 ಕ್ರೀಡಾ ಸಾಧಕರನ್ನು ಅರ್ಜುನ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಅದರಲ್ಲಿ ಏಷ್ಯನ್ ಮತ್ತು ಪ್ಯಾರಾ ಏಷ್ಯನ್ ಕ್ರೀಡಾಕೂಟದ ಸಾಧಕರದ್ದೇ ಸಿಂಹಪಾಲು.
ಶೂಟರ್ ಐಶ್ವರಿ ಪ್ರತಾಪ್ ಸಿಂಗ್ ತೋಮರ್, ಕುಸ್ತಿಪಟು ಅಂತಿಮ ಪಂಘಾಲ್ ಮತ್ತು ಸುನಿಲ್ ಕುಮಾರ್, ಟೇಬಲ್ ಟೆನಿಸ್ ಆಟಗಾರ್ತಿ ಐಹಿಕಾ ಮುಖರ್ಜಿ ಅವರಿಗೂ ಅರ್ಜುನ ಪ್ರಶಸ್ತಿ ಲಭಿಸಿದೆ. ತಮಿಳುನಾಡಿನ ಚೆಸ್ ಗ್ರ್ಯಾಂಡ್ ಮಾಸ್ಟರ್ ಆರ್. ವೈಶಾಲಿ, ಕೋಚ್ ಆರ್.ಬಿ. ರಮೇಶ್ ಅವರಿಗೆ ಕ್ರಮವಾಗಿ ಅರ್ಜುನ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ಲಭಿಸಿದೆ.