ಸಿನಿಮಾ ಕಥೆಯ ಮೂಲಕ ಕೇವಲ ಒಂದು ಸಂದೇಶ ನೀಡಿದರೆ ಸಾಲದು. ನೋಡಿದವರಿಗೆ ಆ ಚಿತ್ರ ತಮ್ಮದೆ, ತಮ್ಮ ಬದುಕಿನ ಭಾಗ ಎನ್ನುವ ಭಾವನೆ ಮೂಡಬೇಕು. ಸಾಮಾನ್ಯವಾಗಿ ರವಿಕೆ ಅಂದ ತಕ್ಷಣ ಅದರ ಬಗ್ಗೆ ಗಂಭೀರ ಚಿಂತನೆಗಿಂತ ಹತ್ತು ಹಲವು ಹಾಸ್ಯಾಸ್ಪದವಾದ ಭಾವನೆ ಬಹುತೇಕರಲ್ಲಿ ಸಹಜವಾಗಿ ಮೂಡುತ್ತದೆ.
ಆದರೆ ಆ ರವಿಕೆಯಿಂದಲೇ ರವಿಕೆಯೊಳಗಿನ ಮನಸ್ಸಿನ ಭಾವನೆಯನ್ನು ಅನಾವರಣಗೊಳಿಸಿ, ಸಮಾಜದಲ್ಲಿ ಅದೆಷ್ಟೋ ಇಂತಹ ಸಂದಿಗ್ಧ ಸ್ಥಿತಿಯಲ್ಲಿರುವ ಹಾಗೂ ಇಂತಹ ಸ್ಥಿತಿಯನ್ನು ಅನುಭವಿಸಿರುವ ಮಹಿಳೆಯರ ಭಾವನೆಗೆ ಈ ಸಿನಿಮಾ ಮೂಲಕ ಬಣ್ಣ ತುಂಬಬೇಕು ಎನ್ನುವ ಹಂಬಲ ಚಿತ್ರ ತಂಡದ್ದು.
ಮದ್ಯಮ ವರ್ಗದ ಕುಟುಂಬವೊಂದು ಗ್ರಾಮೀಣ ಸೊಗಡಿನಲ್ಲಿ ಇರುವ ವಾತಾವರಣ, ಸ್ಥಳೀಯ ಸಂಸ್ಕೃತಿ, ಸಂಪ್ರದಾಯದ ಜೊತೆಗೆ ಹಾಸ್ಯದ ಸ್ಪರ್ಷವನ್ನು ದಕ್ಷಿಣ ಕರ್ನಾಟಕದ ಭಾಷೆಯನ್ನೆ ವಿಭಿನ್ನವಾಗಿ ತೋರಿಸುವ ಮೂಲಕ ಭಾಷಾ ಹಾಗೂ ಆಹಾರ ಸಂಸ್ಕೃತಿಯನ್ನು ಕೂಡ ರವಿಕೆ ಪ್ರಸಂಗದಲ್ಲಿ ಸೂಕ್ಷ್ಮವಾಗಿ ತೋರಿಲಾಗಿದೆ. ಒಬ್ಬ ಟೈಲರ್ ಅಂಗಡಿಯಿಂದ ಆರಂಭವಾದ ಈ ರವಿಕೆ ಪ್ರಸಂಗ ಕೋರ್ಟ್ ಮೆಟ್ಟಿಲೇರಿದಾಗ ಅದಕ್ಕೆ ಸಮಾಜ ಹೆಣ್ಣನ್ನು ನೋಡುವ ಪರಿಯೇ ಈ ಚಿತ್ರದ ಎಳೆಯಾಗಿದೆ.
ರವಿಕೆಯನ್ನು ಆಧಾರವಾವಿಟ್ಟುಕೊಂಡು ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ಪ್ರಯೋಗದ ಮೂಲಕ ಪ್ರಯೋಗಶೀಲತೆಯ ತಂಡದಿಂದ ಶೀಘ್ರವೆ ರವಿಕೆ ಪ್ರಸಂಗ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಇಡೀ ಸಿನಿಮಾ ರವಿಕೆ ವಿಚಾರವಾಗಿ ಹತ್ತ-ಹಲವು ಚರ್ಚೆಗಳನ್ನು ಹುಟ್ಟು ಹಾಕುವ ಜೊತೆಗೆ ಮಹಿಳೆಯ ಮಾನಸಿಕ ವೇದನೆ ಹಾಗೂ ಆಕೆಯ ಕನಸುಗಳಿಗಾದ ನಿರಾಶೆ, ಹೋರಾಟದ ಛಲ, ಸಮಾಜ ಆಕೆಯನ್ನು ಕಾಣುವ ರೀತಿ ಹೀಗೆ ಹಲವಾರು ವಿಚಾರಗಳನ್ನು ರವಿಕೆ ಸುತ್ತ ಸುತ್ತುವರೆಯುತ್ತವೆ.
ಹಕ್ಕಿಗಾಗಿ ಹೋರಾಟ, ಸಮಸಮಾಜದ ಸಂದೇಶ, ಮಹಿಳೆ ಸಂವೇದನೆ ಹೀಗೆ ಸಮಾಜಕ್ಕೊಂದು ಸಂದೇಶವನ್ನು ರವಿಕೆ ಪ್ರಸಂಗ ನೀಡಲಿದೆ. ಈಗಾಗಲೇ ಸಿನಿಮಾ ಟೀಸರ್ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೇ ವ್ಯಕ್ತವಾಗುವ ಜೊತೆಗೆ ಸಿನಿಮಾ ಕುರಿತು ಸಿನಿ ಪ್ರೀಯರಲ್ಲಿ ಹಲವು ನಿರೀಕ್ಷೆ ಮೂಡಿಸಿದೆ.