ಬೆಂಗಳೂರು: ಕೋಟ್ಯಂತರ ರೂ. ಮೌಲ್ಯದ ಬ್ರಾಂಡೆಡ್ ಶೂಗಳನ್ನು ತುಂಬಿದ್ದ ಈಚರ್ ವಾಹನವನ್ನು ಸಿನಿಮೀಯ ಮಾದರಿಯಲ್ಲಿ ಕಳವು ಮಾಡಿದ್ದ ಮೂವರು ಖದೀಮರನ್ನು ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ.
ಅಸ್ಸಾಂ ಮೂಲದ ಸುಭಾನ್ ಪಾಷಾ, ಮನ್ಸರ್ ಅಲಿ ಮತ್ತು ಶಹಿದ್ದುಲ್ ರೆಹಮಾನ್ ಬಂಧಿತ ಆರೋಪಿಗಳಾಗಿದ್ದಾರೆ. ಕಳೆದ ಡಿ. 21 ರಂದು ಆನೇಕಲ್ನ ಸಮೀಪದ ಶೆಟ್ಟಿಹಳ್ಳಿ ಬಳಿಯ ನೈಕಿ ಗೋದಾಮಿನಿಂದ ಹೊಸಕೋಟೆ ಬಳಿಯ ಮಿಂತ್ರ ಗೋದಾಮಿಗೆ ಹೊರಟಿದ್ದ ಶೂ ಹೊತ್ತ ಈಚರ್ ವಾಹನ ಕಾಣೆಯಾಗಿತ್ತು. ಸುಮಾರು ಒಂದು ಕೋಟಿ ಹತ್ತು ಲಕ್ಷ ರೂ. ಮೌಲ್ಯದ 1,558 ಜೊತೆ ಶೂ ಸಹಿತ ಈಚರ್ ವಾಹನ ಕಳುವಾದ ಬಗ್ಗೆ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ನಾಪತ್ತೆಯಾದ ಈಚರ್ ವಾಹನ ಚಾಲಕನ ಹಿನ್ನೆಲೆ ಪರಿಶೀಲನೆ ಮಾಡಿದ್ದಾರೆ. ಆತ ಈ ಹಿಂದೆ ದುಬಾರಿ ಬೆಲೆಯ ಬ್ರಾಂಡೆಡ್ ಬಟ್ಟೆಗಳನ್ನು ಇದೇ ರೀತಿ ವಾಹನ ಸಮೇತ ಕದ್ದು, ಜೈಲು ಸೇರಿದ್ದ ಎಂಬ ಮಾಹಿತಿ ಆಧರಿಸಿ ತನಿಖೆ ನಡೆಸಿದಾಗ ಶೂಗಳ ಜೊತೆ ಅಸ್ಸಾಂ ಮೂಲದ ಮೂವರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಆನೇಕಲ್ ಗೋದಾಮಿನಿಂದ ಶೂಗಳನ್ನು ತುಂಬಿಕೊಂಡ ಹೊರಟ ವಾಹನವನ್ನು ಹೊಸಕೋಟೆ ಬದಲು ನಗರದ ರಜಾಕ್
ಪಾಳ್ಯಕ್ಕೆ ಕದ್ದೊಯ್ದಿದ್ದಾರೆ. ಅಲ್ಲಿನ ಮನೆಯೊಂದರಲ್ಲಿ ಅನ್ ಲೋಡ್ ಮಾಡಿದ ಅಸಾಮಿಗಳು ಈಚರ್ ವಾಹನವನ್ನು ಚಿಕ್ಕಜಾಲದ ಬಳಿ ಬಿಟ್ಟು ಪರಾರಿಯಾಗಿದ್ದಾಗಿ ಆರೋಪಿಗಳು ತಿಳಿಸಿದ್ದಾರೆ.
ಈ ನಡುವೆ ಅತ್ತಿಬೆಲೆ ಪೊಲೀಸರ ಹೊಸೂರು ಮುಖ್ಯರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಅನುಮಾನಾಸ್ಪದವಾಗಿ ಸಾಗುತ್ತಿದ್ದ 407 ವಾಹನವನ್ನು ಅಡ್ಡಗಟ್ಟಿದಾಗ ನಿಲ್ಲಿಸದೇ ಮುಂದೆ ಸಾಗಿದ್ದಾರೆ. ಪೊಲೀಸರು ಚೇಸ್ ಮಾಡುತ್ತಿದ್ದಂತೆ ವಾಹನ ಬಿಟ್ಟು ಪರಾರಿಯಾಗಿದ್ದಾರೆ. ಪರಿಶೀಲನೆ ವೇಳೆ ಕಂಚಿನ ದೇವರ ವಿಗ್ರಹ, ಕಳಶ ದೀಪದ ಕಂಬಗಳು ಪತ್ತೆಯಾಗಿದ್ದು, ತನಿಖೆ ವೇಳೆ ತಮಿಳುನಾಡಿನ ಹೊಸೂರಿನ ಅಂಗಡಿಯೊಂದರಲ್ಲಿ ಕದ್ದ ವಸ್ತುಗಳು ಎಂದು ತಿಳಿದು ಬಂದಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಒಟ್ಟಿನಲ್ಲಿ ಸಣ್ಣ ಸುಳಿವು ನೀಡದೇ ಪಕ್ಕಾ ಸಿನಿಮಾ ಸ್ಟೈಲ್ ನಲ್ಲಿ ಬ್ರಾಂಡೆಡ್ ನೈಕಿ ಶೂಗಳನ್ನು ಎಗರಿಸಿದ್ದವರಲ್ಲಿ ಪ್ರಮುಖ ಆರೋಪಿ ಸಲೇ ಮಹಮದ್ ಲಷ್ಕರ್ ತಲೆ ಮರೆಸಿಕೊಂಡಿದ್ದು, ಉಳಿದ ಆರೋಪಿಗಳ ಪತ್ತೆಗಾಗಿ ಅತ್ತಿಬೆಲೆ ಪೊಲೀಸರು ಬಲೆ ಬೀಸಿದ್ದಾರೆ.