ನೆಲಮಂಗಲ: ನಾಲ್ವರು ಆರೋಪಿಗಳನ್ನು ಬಂಧಿಸಿ ಅವರುಗಳಿಂದ ಸುಮಾರು 18 ಲಕ್ಷ ಮೌಲ್ಯದ 228.33 ಗ್ರಾಂ ತೂಕದ ಚಿನ್ನದ ಒಡವೆಗಳು, ಒಂದು ಟಿವಿ, ಒಂದು ಲ್ಯಾಪ್ಟಾಪ್, ಎರಡು ಮೋಟಾರ್ ಸೈಕಲ್ ಗಳಾದ ಪಲ್ಸರ್ ಮತ್ತು ಯೂನಿಕಾರನ್ ಬೈಕ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ್ ಬಾಲದಂಡಿ ತಿಳಿಸಿದರು.
ನಗರದ ಪೊಲೀಸ್ ಠಾಣೆ ಆವರಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.ಒಂಟಿ ಮಹಿಳೆಯರನ್ನು ಗುರಿಯಾಗಿಸಿ ಸರಗಳ್ಳತನ ಮಾಡುವ ಜತೆ ಮನೆಗಳ್ಳತನವನ್ನು ಸಹ ಮಾಡುತ್ತಿದ್ದು ತಮಿಳುನಾಡಿನ ನಾನಾ ಕಡೆಗಳಲ್ಲಿ ಖದೀಮರು ಚಿನ್ನದ ಸರಗಳನ್ನು ಮಾರಾಟ ಮಾಡಿದ್ದರು. 5 ಪ್ರಕರಣಗಳಿಗೆ ಸಂಬಂಧಪಟ್ಟ ವಸ್ತುಗಳನ್ನು ಮಾತ್ರ ವಶಕ್ಕೆ ಪಡೆದಿದ್ದು ಉಳಿದಂತೆ 5 ಪ್ರಕರಣಗಳಲ್ಲಿನ ಚಿನ್ನದ ಸರವನ್ನು ಆಟಿಕಾ ಗೋಲ್ಡ್ ಕಂಪನಿಯಲ್ಲಿ ಮಾರಾಟ ಮಾಡಿಸಿರುತ್ತಾರೆ.
ನೆಲಮಂಗಲ ಟೌನ್ ಪೊಲೀಸ್ ಠಾಣೆ, ರಾಜನಕುಂಟೆ, ಬೆಂಗಳೂರು ನಗರದ ಸೋಲದೇವನಹಳ್ಳಿ, ಬಾಲೂರು, ರಾಮನಗರ ಜಿಲ್ಲೆಯ ರಾಮನಗರ ಗ್ರಾಮಾಂತರ, ಕನಕಪುರ ಗ್ರಾಮಾಂತರ, ತಾವರೆಕೆರೆ ಪೊಲೀಸ್ ಠಾಣೆ ಸರಹದ್ದುಗಳಲ್ಲಿ ಹತ್ತಕ್ಕೂ ಹೆಚ್ಚು ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ 4 ಆರೋಪಿಗಳನ್ನು ಬಂಧಿಸಲಾಗಿದೆ.
ಸುಮಾರು 20 ಕ್ಕೂ ಹೆಚ್ಚಿನ ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಶಿವಕುಮಾರ್ (33) ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರನ್ನು ಉಪಯೋಗಿಸಿಕೊಂಡು ನೆಲಮಂಗಲ ಟೌನ್ ಪೊಲೀಸ್ ಠಾಣೆ ಸೇರಿದಂತೆ ರಾಜನಕುಂಟೆ, ಬೆಂಗಳೂರು ನಗರ ರಾಮನಗರ ತಾವರೆಕೆರೆ ಸರಹದ್ದುಗಳಲ್ಲಿ ಸರಗಳ ತನ ಮಾಡಿ ತಮಿಳುನಾಡಿನ ವಿವಿಧ ಕಡೆಯಲ್ಲಿ ಚಿನ್ನದ ಸರಗಳನ್ನು ಮಾರಾಟ ಮಾಡುತ್ತಿದ್ದನು.
ಅಶೋಕ (43), ವಿನೋದ್ (36), ಇವರುಗಳು ಅಣ್ಣ ತಮ್ಮಂದಿರುಗಳಾಗಿದ್ದು ನೆಲಮಂಗಲ ಮಾದನಾಯಕನಹಳ್ಳಿ ಸೇರಿದಂತೆ 20ಕ್ಕೂ ಹೆಚ್ಚು ಸರ ಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದು ಮನೆಗಳ್ಳತನ ಬೈಕ್ ಕಳ್ಳತನ ಮಾಡುತ್ತಿದ್ದರು.ಸಂತೋಷ್ (30) ಬಸವನಹಳ್ಳಿ ಸೇರಿದಂತೆ ರೈಲ್ವೆ ಟ್ರ್ಯಾಕ್ ಬಳಿ ವಾಕಿಂಗ್ ಮಾಡುತ್ತಿದ್ದ ಒಂಟಿ ಮಹಿಳೆಯರ ಕತ್ತಿನಲ್ಲಿದೆ ಚಿನ್ನದ ಮಾಂಗಲ್ಯವನ್ನು ಕದಿಯುತ್ತಿದ್ದನು. ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ 4 ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿ, ಕಳವಾಗಿದ್ದ ಮಾಲುಗಳನ್ನು ವಶಕ್ಕೆ ಪಡೆಯಲು ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
ಮಾಲೀಕರಿಗೆ ಹಸ್ತಾಂತರ: ಕಳ್ಳತನದಲ್ಲಿ ಕಳೆದುಕೊಂಡಿದ್ದ ಒಡವೆಗಳನ್ನು ಪೊಲೀಸರು ಖದೀಮರನ್ನು ಬಂಧಿಸಿ ಒಡವೆಗಳನ್ನು ವಶಕ್ಕೆ ಪಡೆದು ಒಡವೆಗಳ ಮಾಲೀಕರಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ್ ಬಾಲದಂಡಿ ಹಸ್ತಾಂತರ ಮಾಡಿದರು.ಈ ಸಂದರ್ಭದಲ್ಲಿ ಅಪರ ಪೊಲೀಸ್ ಅಧೀಕ್ಷಕ ನಾಗರಾಜು, ಶಿರಕೋಳ್, ಪಿಎಸ್ಐ ಜಯಂತಿ, ನಂಜಯ್ಯ, ಧನರಾಜ್, ಸಿಬ್ಬಂದಿಗಳಾದ ರಘು, ಕೇಶವಮೂರ್ತಿ, ಬಸವರಾಜು, ಚನ್ನೇಗೌಡ, ಇಂದ್ರಮ್ಮ, ಹರೀಶ್, ಫಕ್ರು ಸಾಬ್ ಪಠಾಣ್ ಮತ್ತಿತರರಿದ್ದರು.