ನೆಲಮಂಗಲ: ನಿರುದ್ಯೋಗಿಗಳಿಗೆ ಗಾಳ ಹಾಕಿ ಮೋಸ ಮಾಡುತಿದ್ದ ಸಿವೈಎಲ್ ಫಕ್ಷನ್ ಮಾರ್ಕೆಟಿಂಗ್ ಎಂಬ ಕಂಪನಿಯೊಂದು ನೆಟ್ವರ್ಕ್ ಮಾರ್ಕೆಟಿಂಗ್ ಹೆಸರಲ್ಲಿ ಯುವಕ-ಯುವತಿಯರಿಗೆ ಕೆಲಸ ನೀಡುವ ನೆಪದಲ್ಲಿ ಹಣ ಪಡೆದು ಮೋಸ ಮಾಡುತಿದ್ದ ಆರೋಪಿಗಳನ್ನು ಟೌನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರದ ಬಸವನಹಳ್ಳಿ ಬಳಿಯ ಸಿವೈಎಲ್ ಫಕ್ಷನ್ ಮಾರ್ಕೆಟಿಂಗ್ ಪ್ರೈವೇಟ್ ಕಂಪನಿ ಹೆಸರಿನಲ್ಲಿ ಆರೋಪಿಗಳಾದ ಆದಿತ್ಯ , ಅಭಿಷೇಕ್, ಹೇಮತ್ಕುಮಾರ್,ಪುರುಷೋತ್ತಮ್ ಸೇರಿದಂತೆ ಹಲವರು ಕಂಪನಿ ಪ್ರಾರಂಭಿಸಿ ನಿರುದ್ಯೋಗಿ ಹೆಣ್ಣು ಮಕ್ಕಳಿಗೆ ತರಬೇತಿ ನೀಡಿ ಪ್ರತಿಷ್ಠಿತ ಕಂಪನಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ತಲಾ 45ಸಾವಿರ ರೂ ಹಣ ಪಡೆದು ಒಂದು ವರ್ಷ ದಿಂದ ವಂಚಿಸುತ್ತಿದ್ದರು.
ಕೆಲಸದ ಆಮಿಷಕ್ಕೆ ಒಳಗಾದ ಕೋಮಲ, ವರಲಕ್ಷ್ಮಿ, ಅಂಜಲಿ 45 ಸಾವಿರ ರೂ. ನೀಡಿದ್ದಾರೆ. ಆದರೆ, ಎಷ್ಟು ದಿನಗಳಾದರೂ ಯಾವುದೇ ಉದ್ಯೋಗ ಕೊಡಿಸದಿದ್ದಾಗ ಹಣ ವಾಪಸ್ ಕೇಳಿದ್ದಾರೆ. ನೀವು ಉದ್ಯೋಗ ಕ್ಕಾಗಿ ಬರುವ ಹೆಣ್ಣು ಮಕ್ಕಳನ್ನು ತರಬೇತಿಗಾಗಿ ಕಂಪನಿಗೆ ಸೇರಿಸಿ, ಅವರು ಹಣ ಪಾವತಿಸಿದರೆ, ನಿಮ್ಮ ಹಣ ವಾಪಸ್ಸು ಬರುತ್ತದೆ ಎಂದು ಹೇಳಿದ್ದಾರೆ.
ಇದರಿಂದ ಹಣ ಕಳೆದುಕೊಂಡು ಮನ ನೊಂದ ಹೆಣ್ಣು ಮಕ್ಕಳು ಕೆಆರ್ ಎಸ್ ಪಕ್ಷದ ತಾಲೂಕು ಅಧ್ಯಕ್ಷ ಅರುಣ್ ಕುಮಾರ್ ಬಳಿ ವಿಷಯ ತಿಳಿಸಿದ್ದಾರೆ. ವಂಚನೆಗೆ ಒಳಗಾದವರ ಪರ ಕೆಆರ್ಎಸ್ ಪಕ್ಷದ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಸ್ಥಳೀಯ ಪೊಲೀಸರಿಗೆ ಸಾಕ್ಷಿ ಸಮೇತ ದೂರ ನೀಡಿ 9 ಜನರ ಮೇಲೆ ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಹಣ ಪಡೆದು ನೂರಾರು ಯುವಕ ಯುವತಿಯರಿಗೆ ಲಕ್ಷಾಂತರ ರೂಪಾಯಿ ಮೋಸ ಮಾಡುತಿದ್ದ ಖತರ್ನಾಕ್ ಖದೀಮರ ಮೇಲೆ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಚೇರಿ ನಡೆಸುತ್ತಿದ್ದ 9 ಜನರ ಪೈಕಿ ಅಭಿಷೇಕ್(21),ಅದಿತ್ಯ(22), ಹೇಮಂತ್(26), ಜಗದೀಶ್(28)ನನ್ನು ಬಂಧಿಸಲಾಗಿದೆ.
ಸದ್ಯ ಈ ಘಟನೆ ಸಂಬಂಧ 4 ಜನರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದು ತುಮಕೂರು, ನೆಲಮಂಗಲ, ಕೋಲಾರ, ಮೈಸೂರು ಸೇರಿದಂತೆ ಹಲವಾರು ಜಿಲ್ಲೆಯಲ್ಲಿ ತಲೆ ಎತ್ತಿರುವ ನಕಲಿ ಕಂಪನಿ ವಿರುದ್ಧ ತನಿಖೆ ಚುರುಕುಗೊಂಡಿದೆ.