ಬೆಂಗಳೂರು: ಕೆಲಸ ಹುಡುಕುವ ಯುವಕ-ಯುವತಿಯರನ್ನು ಟಾರ್ಗೆಟ್ ಮಾಡಿ ಕೆಲಸದ ಆಮೀಷವೊಡ್ಡಿ ಹಣ ಪೀಕಿ ಮೋಸ ಮಾಡುತ್ತಿದ್ದಾರೆ ಪ್ರಕರಣ ಸಂಬಂಧ ವೈಟ್ ಫೀಲ್ಡ್ ಪೊಲೀಸರು ಪವನ್ ಕುಮಾರ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.
ಈ ಆರೋಪಿ ಒಂದಲ್ಲಾ ಎರಡಲ್ಲಾ ಬರೋಬ್ಬರಿ ಒಂದೂ ಸಾವಿರಕ್ಕೂ ಹೆಚ್ಚು ಯುವಕ ಯುವತಿಯರಿಗೆ ಮೋಸ ಮಾಡಿ ಲಕ್ಷಾಂತರ ರೂ. ವಂಚಿಸಿ ಕಂಬಿ ಹಿಂದೆ ಬಿದ್ದಿದ್ದಾನೆ. ಬಂಧಿತ ಆರೋಪಿ ಪವನ್ ಕುಮಾರ್ ಆ್ಯಂಡ್ ಗ್ಯಾಂಗ್ SIMAKH TECHNOLOGY ಮತ್ತು MONTY CORPS ಎಂಬ ಕಂಪನಿ ತೆರೆದಿದ್ದರು.
ಈ ಖದೀಮರು ಹೈಫೈ ಟೆಕ್ ಪಾರ್ಕ್ ನಲ್ಲಿ ಕಚೇರಿ ಮಾಡ್ತಿದ್ದರು. ನಮ್ಮ ಕಂಪನಿಯಲ್ಲಿ ಕೆಲಸ ಕೊಡ್ತೀನಿ ಎಂದು ಪರಿಚಯಸ್ಥರ ಮೂಲಕ ನಿರುದ್ಯೋಗಿ ಯುವಕ,ಯುವತಿಯರಿಗೆ ಗಾಳ ಹಾಕುತ್ತಿದ್ದರು. ಕೆಲಸ ಸಿಗುತ್ತೆ ಎಂಬ ಆಸೆ ಬಿದ್ದ ಜನ ಹಣ ನೀಡಿ ವಂಚನೆಗೆ ಒಳಗಾಗಿದ್ದಾರೆ. ಇನ್ನು ಪವನ್ ಆ್ಯಂಡ್ ಟೀಂ ಆಂಧ್ರ ಮೂಲದ ವಿದ್ಯಾವಂತರನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುತ್ತಿದ್ದರು. ಇದುವರೆಗೂ ಒಂದೂ ಸಾವಿರಕ್ಕೂ ಹೆಚ್ಚು ಯುವಕ ಯುವತಿಯರಿಗೆ ಮೋಸ ಮಾಡಿ 20 ಕೋಟಿಗೂ ಅಧಿಕ ಹಣ ಪೀಕಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಪವನ್ ಗ್ಯಾಂಗ್, ವರ್ಷಕ್ಕೆ ಐದು ಲಕ್ಷ ಪ್ಯಾಕೇಜ್ ಕೊಡ್ತೀವಿ ಎಂದು ಆಮಿಷವೊಡ್ಡುತ್ತಿದ್ದರು. ಅಷ್ಟೇ ಅಲ್ಲ ಬೇರೆ ಕಂಪನಿಯಲ್ಲಿಯೂ ಕೆಲಸ ಕೊಡಿಸುವುದಾಗಿ ಡ್ರಾಮ ಮಾಡಿ ನಂಬಿಸುತ್ತಿದ್ದರು. ಬಳಿಕ ಒಬ್ಬೊಬ್ಬರಿಂದ ಒಂದರಿಂದ ಎರಡು ಲಕ್ಷದವರೆಗೆ ಸುಲಿಗೆ ಮಾಡುತ್ತಿದ್ದರು. ಸೆಕೆಂಡ್ ಹ್ಯಾಂಡ್ ಲ್ಯಾಪ್ ಟಾಪ್ ಕೊಟ್ಟು ಕೆಲಸಕ್ಕೆ ಸೇರಿಸಿಕೊಳ್ಳುತ್ತಿದ್ದರು. ಒಂದು ತಿಂಗಳ ಸಂಬಳ ಕೂಡ ನೀಡ್ತಿದ್ದರು.
ಆ ಬಳಿಕ ಕಂಪನಿ ಕ್ಲೋಸ್ ಮಾಡಿ ಎಸ್ಕೇಪ್ ಆಗುತ್ತಿದ್ದರು. ಹೀಗೆ ನಗರದ ಬೇರೆ ಬೇರೆ ಭಾಗಗಳಲ್ಲಿ ವಂಚನೆ ಮಾಡಿದ್ದಾರೆ. ಹಣ ಕಳೆದುಕೊಂಡ ಯುವಕ, ಯುವತಿಯರು ಕಂಗಾಲಾಗಿದ್ದಾರೆ. ಇಷ್ಟೆಲ್ಲಾ ಆದ ಬಳಿಕ ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ಸಂತ್ರಸ್ತರು ದೂರು ನೀಡಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇನ್ನು ಸಾವಿರಕ್ಕೂ ಅಧಿಕ ಜನರನ್ನು ವಂಚಿಸಿ ದೆಹಲಿಯಲ್ಲಿ ಕುಳಿತಿದ್ದ ಆರೋಪಿ ಪವನ್ನನ್ನು ಪೊಲೀಸರು ಹಿಡಿದದ್ದೇ ರೋಚಕ. ಆರೋಪಿಯನ್ನು ಬೆಂಗಳೂರಿಗೆ ಕರೆಸಿಕೊಳ್ಳಲು ಪೊಲೀಸರು ಸಂತ್ರಸ್ತರ ಜೊತೆ ಸೇರಿ ಸ್ಕೆಚ್ ಹಾಕಿದ್ದಾರೆ. ಮೂವತ್ತು ಜನರು ಕಂಪನಿ ಸೇರಿಕೊಳ್ಳಲು ಬಂದಿದ್ದಾರೆ. ಹಣದ ಜೊತೆಗೆ ರೆಡಿ ಇದ್ದಾರೆ ಎಂದು ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ಎದ್ನೋ ಬಿದ್ನೋ ಅಂತಾ ಓಡೋಡಿ ಬೆಂಗಳೂರಿಗೆ ವಿಮಾನದ ಮೂಲಕ ಬಂದ ಪವನ್ನನ್ನು ಬೆಂಗಳೂರಿನ ಖಾಸಗಿ ಹೋಟೆಲ್ಗೆ ಕರೆಸಿಕೊಂಡು ಲಾಕ್ ಮಾಡಿದ್ದಾರೆ.