ದೊಡ್ಡಬಳ್ಳಾಪುರ: ರಾತ್ರಿ ವೇಳೆ ದ್ವಿಚಕ್ರ ವಾಹನ ಸವಾರರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಸಿ, ಮೊಬೈಲ್ ಹಾಗೂ ಹಣ ದೋಚುತ್ತಿದ್ದ ಮೂವರು ಖತರ್ನಾಕ್ ಖದೀಮರು ಈಗ ಪೊಲೀಸರ ಅತಿಥಿಯಾಗಿದ್ದಾರೆ.ಏ.14 ರಂದು ರಾತ್ರಿ 11.30 ರ ಸುಮಾರಿಗೆ ಆಲೂರು ದುದ್ದನಹಳ್ಳಿ ನಿವಾಸಿ ಅಮರ್ ಹಾಗೂ ಕೋಡಿಹಳ್ಳಿ ನಿವಾಸಿ ಅನಿಲ್ ಎಂಬುವರು ಬೈಕಿನಲ್ಲಿ ಸೊಣ್ಣಪ್ಪನಹಳ್ಳಿಗೆ ಮಾರ್ಗವಾಗಿ ಹೋಗುತ್ತಿದ್ದಾಗ ಮೂವರು ಆರೋಪಿಗಳು ವಾಹನ ಅಡ್ಡಗಟ್ಟಿ, ಮಾರಕಾಸ್ತ್ರಗಳಿಂದ ಬೆದರಿಸಿದ್ದಾರೆ.
ಆಗ ಬೈಕ್ ಸವಾರರಿಬ್ಬರು ತಮ್ಮ ಬಳಿಯಿದ್ದ ಮೊಬೈಲ್, ಹಣ ಕೊಡಲು ಹೋದಾಗ ಸುತ್ತಲಿನ ಗ್ರಾಮಗಳ ಜನರು ತಕ್ಷಣ ಆಗಮಿಸಿ, ಆರೋಪಿಗಳನ್ನು ಹಿಡಿದು ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.ಯಲಹಂಕ ತಾಲ್ಲೂಕಿನ ಚಿಕ್ಕಜಾಲದ ರಂಗಸ್ವಾಮಿ ಕ್ಯಾಂಪಿನ ನಿವಾಸಿ ಆಕಾಶ್(19), ಟೆಲಿಕಾಂ ಲೇಔಟ್ ನಿವಾಸಿ ಪ್ರವೀಣ್(18) ಹಾಗೂ ಜಾಲ ಹೋಬಳಿಯ ಮಾರನಾಯಕನಹಳ್ಳಿ ನಿವಾಸಿ ಹನುಮಂತ ಎಸ್.ಡಿ (22) ಬಂಧಿತ ಆರೋಪಿಗಳು.
ಬಂಧಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ರೂ.4.20 ಲಕ್ಷ ಬೆಲೆ ಬಾಳುವ ವಿವಿಧ ಕಂಪನಿಗಳ 20 ಮೊಬೈಲ್ ಫೋನ್ ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಗ್ರಾಮಾಂತರ ಪೊಲೀಸ್ ಠಾಣೆ ಸರ್ಕಲ್ ಇನ್ ಸ್ಪೆಕ್ಟರ್ ಸಾದಿಕ್ ಪಾಷಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿಗಳಿಂದ ವಶಪಡಿಸಿಕೊಂಡಿ ರುವ ಮೊಬೈಲ್ ಗಳನ್ನು ಪರಿಶೀಲಿಸಿ ವಾರಸುದಾರರಿಗೆ ಒಪ್ಪಿಸಲಾಗುವುದು ಎಂದು ಅವರು ಹೇಳಿದರು.
ಪ್ರಕರಣವನ್ನು ಗಂಭೀರವಾಗಿ ಪರಿಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಎಸ್ಪಿ ಪುರುಷೋತ್ತಮ್, 2ನೇ ಹೆಚ್ಚುವರಿ ಎಸ್ಪಿ ನಾಗರಾಜ್ ಕೆ.ಎಸ್., ಡಿವೈಎಸ್ಪಿ ಪಿ.ರವಿ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆ ಇನ್ ಸ್ಪೆಕ್ಟರ್ ಸಾದಿಕ್ ಪಾಷಾ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.
ತನಿಖಾ ತಂಡದಲ್ಲಿ ಪಿಎಸ್ಐ ರವಿ ಟಿ.ಎನ್, ಸಿಬ್ಬಂದಿಗಳಾದ ಅರ್ಜುನ್ ಲಮಾಣಿ, ಪ್ರವೀಣ್, ಸಚಿನ್ ಉಪ್ಪಾರ್ ಅವರು ಆರೋಪಿಗಳಿಂದ ಹೆಚ್ಚಿನ ಮಾಲು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಮೂರುದಿನಗಳ ಕಾಲ ಪೋಲಿಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.