ನವದೆಹಲಿ: ಮಾಜಿ ಸಚಿವರಾದ ಮನೀಷ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಬಗ್ಗೆ ಇಡೀ ದೇಶ ಹೆಮ್ಮೆಪಡುತ್ತಿದೆ. ರಾಷ್ಟ್ರ ರಾಜಧಾನಿಯಲ್ಲಿ ಒಳ್ಳೆಯ ಕೆಲಸವನ್ನು ನಿಲ್ಲಿಸಲು ಅವರನ್ನು ಬಂಧಿಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಆರೋಪಿಸಿದ್ದಾರೆ.
ಎಎಪಿ ಶಾಸಕರು ಮತ್ತು ಕೌನ್ಸಿಲರ್‍ಗಳೊಂದಿಗಿನ ಸಭೆಯ ನಂತರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, ಎಎಪಿ ಒಂದು ಚಂಡಮಾರುತವಾಗಿದೆ, ಈಗ ನಮ್ಮನ್ನು ತಡೆಯಲು ಸಾಧ್ಯವಿಲ್ಲ ಮತ್ತು ನಮ್ಮ ಸಮಯ ಬಂದಾಗಿದೆ ಎಂದು ಬಿಜೆಪಿಗೆ ಸವಾಲು ಹಾಕಿದರು.
ಅಬಕಾರಿ ನೀತಿ ಹಗರಣದಲ್ಲಿ ಸಿಸೋಡಿಯಾ ಅವರ ಬಂಧನ ಅಭಿವೃದ್ಧಿಗೆ ಕೆಲಸಗಳಿಗೆ ಚಿಕ್ಕ ವಿರಾಮವಾಗಿದ್ದು, ಹೊಸ ಸಚಿವರು ಸರ್ಕಾರದ ಉತ್ತಮ ಕೆಲಸವನ್ನು ದುಪ್ಪಟ್ಟು ವೇಗದಲ್ಲಿ ಮುಂದುವರಿಸುತ್ತಾರೆ ಎಂದು ಪ್ರತಿಪಾದಿಸಿದರು.
‘ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ನಡೆಯುತ್ತಿರುವ ಒಳ್ಳೆಯ ಕೆಲಸಗಳನ್ನು ತಡೆಯಲು ಬಯಸುತ್ತಿದ್ದಾರೆ. ಆದರೆ, ಇಲ್ಲಿನ ಕೆಲಸಗಳು ದುಪ್ಪಟ್ಟು ವೇಗದಲ್ಲಿ ನಡೆಯುತ್ತವೆ ಎಂದು ನಾನು ಜನರಿಗೆ ಹೇಳಲು ಬಯಸುತ್ತೇನೆ. ಶೀಘ್ರದಲ್ಲೇ ಸಚಿವ ಸಂಪುಟಕ್ಕೆ ಸೇರಲಿರುವ ಅತಿಶಿ ಮತ್ತು ಸೌರಭ್ ಭಾರದ್ವಾಜ್ ಅವರು ಶಿಕ್ಷಿತರು.
ದುಪ್ಪಟ್ಟು ವೇಗದಲ್ಲಿ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದರು ಕೇಜ್ರಿವಾಲ್. ದೆಹಲಿ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ ಎಎಪಿ ನಾಯಕರಾದ ಸಿಸೋಡಿಯಾ ಮತ್ತು ಜೈನ್ ದೆಹಲಿ ಸರ್ಕಾರದ ಪ್ರಮುಖ ಮುಖಗಳಾಗಿದ್ದರು.
Leave a Review