ಬೆಂಗಳೂರು: ಪಾರ್ಕಿಂಗ್ ವಿಚಾರಕ್ಕೆ ಅಕ್ಕಪಕ್ಕದ ಮನೆಯವರ ನಡುವೆ ನಡೆದ ಗಲಾಟೆ ಉಲ್ಬಣಗೊಂಡು, ಆಟೋ ಚಾಲಕ ಹಾಗೂ ಆತನ ಮನೆಯವರ ಮೇಲೆ ಅನ್ಯಕೋಮಿನ ಸುಮಾರು 40 ಮಂದಿ ಹಲ್ಲೆ ನಡೆಸಿದ ಘಟನೆ ಪ್ರಗತಿ ಬಡಾವಣೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಮನೆಗೆ ನುಗ್ಗಿದ ಪುಂಡರು ಮಹಿಳೆಯರು ಮಕ್ಕಳೆನ್ನದೆ ಹಲ್ಲೆ ನಡೆಸಿದ್ದು , ಮಾಂಗಲ್ಯ ಸರ ಹಾಗೂ ಮೊಬೈಲ್ ಕೂಡ ಕಸಿದುಕೊಂಡು ಹೋಗಿದ್ದಾರೆ ಎಂದು ಸಂತ್ರಸ್ತರು ದೂರಿದ್ದಾರೆ.ಗಲಾಟೆಯಲ್ಲಿ ಶಿವಕುಮಾರ್ ಎಂಬ ವ್ಯಕ್ತಿಯ ಕುಟುಂಬ ಸೇರಿದಂತೆ ಎಂಟು ಮಂದಿ ಮೇಲೆ ಹಲ್ಲೆ ನಡೆದಿದೆ. ಪಕ್ಕದ ಮನೆಗೆ ಸಂಬಂಧಿಸಿದ ಅನ್ಯಕೋಮಿನ ಯುವಕ ಹಾಗೂ ಆತನ ಕಡೆಯವರಿಂದ ಹಲ್ಲೆ ನಡೆದಿದೆ.
ನಾಲ್ವರು ಮಹಿಳೆಯರು ಹಾಗೂ ನಾಲ್ವರು ಪುರುಷರು ಹಲ್ಲೆಯಲ್ಲಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.ಹಲ್ಲೆಗೊಳಗಾದ ಶಿವಕುಮಾರ್ ಹಾಗೂ ಅನ್ಯಕೋಮಿನ ವ್ಯಕ್ತಿ ಇಕ್ಕಟ್ಟಾದ ರಸ್ತೆಯಿರುವ ಏರಿಯಾದ ಅಕ್ಕಪಕ್ಕದ ನಿವಾಸಿಗಳಾಗಿದ್ದಾರೆ. ವೃತ್ತಿಯಲ್ಲಿ ಆಟೋ ಚಾಲಕರಾದ ಶಿವಕುಮಾರ್, ತಮ್ಮ ಮನೆ ಮುಂದೆ ಆಟೋ ನಿಲ್ಲಿಸಿದ್ದರು. ಈ ವೇಳೆ ಪಕ್ಕದ ಅನ್ಯಕೋಮಿನ ವ್ಯಕ್ತಿಯ ಸಂಬಂಧಿ ಮನೆಯ ಮುಂದೆಯೂ ಆಟೋ ನಿಲ್ಲಿಸಿದ್ದ.
ಇದರಿಂದ ಟ್ರಾಫಿಕ್ ಬಂದ್ ಆಗಿತ್ತು. ಹೀಗಾಗಿ ಶಿವಕುಮಾರ್, ಆಟೋ ನಿಲ್ಲಿಸಿದ್ದಕ್ಕೆ ಪ್ರಶ್ನೆ ಮಾಡಿದ್ದ. ಈ ವೇಳೆ ಪರಸ್ಪರ ಗಲಾಟೆ ಶುರುವಾಗಿತ್ತು. ಗಲಾಟೆ ಜೋರಾಗುತ್ತಿದ್ದಂತೆ ಅನ್ಯಕೋಮಿನ ವ್ಯಕ್ತಿ ಅಲ್ಲಿಂದ ಹೊಗಿದ್ದು, ಕೂಗಳತೆ ದೂರದಲ್ಲೇ ಇದ್ದ ಪ್ರಾರ್ಥನಾ ಮಂದಿರದಲ್ಲಿದ್ದ ತನ್ನ ಜೊತೆಗಾರರೊಂದಿಗೆ ವಾಪಸ್ ಬಂದು ಮತ್ತೆ ಗಲಾಟೆಯಲ್ಲಿ ತೊಡಗಿದ್ದ. ಗಲಾಟೆ ನಡುವೆ ಈ ಗುಂಪು ಅವಾಚ್ಯ ಶಬ್ದಗಳಿಂದ ಬಯ್ಯುತ್ತ ಶಿವಕುಮಾರ್ ಮನೆಯೊಳಗೆ ಸಹ ನುಗ್ಗಿ ಹಲ್ಲೆ ಮಾಡಿದೆ. ಸದ್ಯ ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.