ಆಲಮಟ್ಟಿ : ಕಲಾಕೃತಿಗಳ ಕ್ರಿಯೆಯಲ್ಲಿ ಮಗ್ನವಾಗುವ ಭಾವನೆಗಳು ವಿಶೇಷವಾಗಿ ರೂಪಗೊಂಡು ವಿಭಿನ್ನತೆಯ ದೃಶ್ಯ ಬಿಂಬ ಸೃಷ್ಟಿಸುತ್ತವೆ.ಅವು ನೋಡುಗರ ಕಲ್ಪನಾಲೋಕವನ್ನು ಮುದಗೊಳಿಸಿ ಹಿತಾನುಭವ ನೀಡುತ್ತವೆ ಎಂದು ಕೆಬಿಜೆಎನ್ ಎಲ್ ಅಸಿಸ್ಟೆಂಟ್ ಇಂಜಿನಿಯರ್ ಶ್ರೀಮತಿ ಶ್ರೀರಕ್ಷಾ ಎಂ.ಆರ್. ಅಭಿಪ್ರಾಯಿಸಿದರು.ಸ್ಥಳೀಯ ಆರ್.ಬಿ.ಪಿ.ಜಿ. ಹಳಕಟ್ಟಿ ಪ್ರೌಢಶಾಲೆಯಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ವತಿಯಿಂದ ಶಾಲಾ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಜಲ ಸಂರಕ್ಷಣೆ ಜಾಗೃತಿ ಕುರಿತಾದ ಚಿತ್ರಕಲಾ ಸ್ಪಧೆ೯ಗೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದಲ್ಲಿ ಹಲ ಜಲಾಶಯಗಳಿದ್ದರೂ ಕೇಂದ್ರ ಜಲ ಆಯೋಗದವರು ಜಲ ಸಂರಕ್ಷಣೆ ಜಾಗೃತಿಗಾಗಿ ಆಲಮಟ್ಟಿ ಜಲಾಶಯ ಪ್ರದೇಶವನ್ನು ಆಯ್ಕೆಮಾಡಿಕೊಂಡಿದ್ದಾರೆ. ಕೆಬಿಜೆಎನ್ ಎಲ್ ಗೆ ಇದು ಹೆಮ್ಮೆಪಡುವ ಸಂತಸದ ಸಂಗತಿಯಗಿದೆ. ಜಲ ಸಂರಕ್ಷಣೆ ಜಾಗೃತಿ ಇಲ್ಲಿ ಉನ್ಮಾದದ ಮಿತಿ ಆಧರಿಸಿ ಅಭಿವ್ಯಕ್ತಗೊಳ್ಳಲು ಹೊಸರೂಪದ ಅವಕಾಶ ಪಡೆದಿದೆ ಎಂದರು.
ಮಕ್ಕಳು ನಿಮ್ಮಲ್ಲಿ ಹುದುಗಿರುವ ಕಲೆ, ಕಲಾ,ಕೌಶಲ್ಯವನ್ನು ಈ ಚಿತ್ರಕಲಾ ಸ್ಪಧೆ೯ಯಲ್ಲಿ ಸೃಜನಾತ್ಮಕವಾಗಿ ಅರಳಿಸಬೇಕು. ಮನದಾಳದಲ್ಲಿ ಅಡಗಿರುವ ಕಲಾರಸ ಭಾವಾಂತರವನ್ನು ಬಣ್ಣ,ಕುಂಚದ ಸ್ಪರ್ಶದಿಂದ ಹೊರಹಾಕಿ ತಮ್ಮ ಪ್ರತಿಭೆಯನ್ನು ವೈವಿಧ್ಯಮಯವಾಗಿ ಪ್ರದಶಿ೯ಸಿಬೇಕು. ಸ್ಪಧೆ೯ಯಲ್ಲಿ ಪ್ರಥಮ,ದ್ವಿತೀಯ, ತೃತೀಯ ಸ್ಥಾನವನ್ನು ಪರಿಗಣನೆಗೆ ತಗೆದುಕೊಳ್ಳಬಾರದು. ಭಾಗವಹಿಸಿದವರೆಲ್ಲರೂ ಜಯ ಸಾಧಿಸಿದಂತೆ. ಅದರಲ್ಲೂ ವಿಶೇಷವಾಗಿ ಇಲ್ಲಿ ಬಾಲೆಯರೇ ಮೇಲುಗೈ ಸಾಧಿಸುತ್ತಾರೆಂಬ ಅಪೇಕ್ಷಣೀಯ ನುಡಿ ಶ್ರೀರಕ್ಷಾ ಹೇಳಿದರು.
ಹೆಣ್ಣು ಮಕ್ಕಳು ಇಂದು ಎಲ್ಲಾ ರಂಗದಲ್ಲಿ ಭಾಗಶಃ ಮುಂಚೂಣಿ ಸ್ಥಾನವನ್ನು ಗಿಟ್ಟಿಸಿಕೊಳ್ಳುತ್ತಲ್ಲಿದ್ದಾರೆ. ತಮ್ಮ ತಮ್ಮ ಕಾಯಕದಲ್ಲಿ ಶ್ರದ್ಧಾ ಪ್ರಾಮಾಣಿಕತೆಗೆ ಹೆಚ್ಚು ಪ್ರಾಮುಖ್ಯತೆ ಮಹಿಳೆಯರು ನೀಡುತ್ತಿರುವುದರಿಂದಲ್ಲೇ ಸಕಲ ಕ್ಷೇತ್ರದಲ್ಲಿಂದು ಮಿನುಗುತ್ತಿದ್ದಾರೆ.ಇಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಬಾಲೆಯರೇ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ಖುಷಿಯಾಗಿದೆ. ಭಾರತೀಯ ನಾರಿಲೋಕ ಈಗ ಸಶಕ್ತ, ಸಂಸ್ಕರಿತವಾಗಿದೆ ಎಂದು ಬಣ್ಣಿಸಿದರು. ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಮಾತನಾಡಿ, ಮಕ್ಕಳ ಶೈಕ್ಷಣಿಕ ವಿಕಸನಕ್ಕೆ ಚಿತ್ರಕಲೆ ಸಹಕಾರಿಯಾಗಿದೆ. ಶಿಕ್ಷಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಬುದ್ದಿ ಭಾವ, ಕ್ರಿಯಾತ್ಮಕ ಆಲೋಚನಾ ಕ್ರಮ ವೃದ್ಧಿಸುತ್ತದೆ. ಚಿತ್ರ ಬಿಡಿಸುವುದೆಂದರೆ ಮಕ್ಕಳಿಗೆ ತುಂಬಾ ಇಷ್ಟ ಎಂದರು.
ಜಲ ಸಂರಕ್ಷಣೆ ಅರಿವು ಪ್ರತಿಯೊಬ್ಬರಲ್ಲೂ ಮೂಡಬೇಕು.ಇದು ಜೀವನ ವಿಧಾನದಲ್ಲಿ ಪ್ರಾಮುಖ್ಯತೆ ಹೊಂದಬೇಕು. ಜಲ ರಕ್ಷಣೆಗೆ ಕೈ ಜೋಡಿಸಿದರೆ ಮಾತ್ರ ಮುಂದಿನ ಪೀಳಿಗೆ ಬದುಕುಳಿಯಲು ಸಾಧ್ಯ.ಜಲದಿಂದಲೇ ಹಸಿರು ಸಂವರ್ಧನೆ.ಹಸಿರಿದ್ದರೆ ಉಸಿರಿಗೆ ಚೇತನ. ಜಲ ಹನಿಗಳೇ ಭೂವೋಡಲಿನ ಜೀವಕೋಶಗಳ ಸುಸ್ಥಿರ ಬದುಕಿಗೆ ವರದಾನವಾಗಿದೆ ಎಂದರು. ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವೀರಣ್ಣ ಕೋನಾ ಮಾತನಾಡಿ, ಭವಿಷ್ಯತ್ತಿನ ಪೀಳಿಗೆಗೆ ನೀರಿನ ಮಹತ್ವ ತಿಳಿ ಹೇಳಬೇಕಾಗಿದೆ.ನೀರು ಪರಿಸರ ಸಮತೋಲನಕ್ಕೆ ಕಾರಣವಾಗಿದೆ. ಪ್ರತಿ ಜೀವಕ್ಕೆ ನೀರು ಮೌಲ್ಯಯುತವಾಗಿದೆ. ಜಲದಿಂದಲೇ ಸಮೃದ್ಧವಾದ ಸೊಬಗು ಭೂಮಿ ಮೇಲೆ ನೋಡಲು ಸಾಧ್ಯ. ನೀರಿನ ಬಳಕೆ ಹಿತಮಿತವಾಗಿರಬೇಕು.ನೀರು ಉಳಿಸಿದರೆ ನಮ್ಮೆಲ್ಲರ ಮುಂದಿನ ಭವಿಷ್ಯ. ನೀರು ರಕ್ಷಣೆ ಎಲ್ಲರ ಹೊಣೆ. ಆರೋಗ್ಯಕರ ಜೀವನಕ್ಕೆ ಜಲ ಸಂರಕ್ಷಣೆ ಅತ್ಯಗತ್ಯ. ಇದಕ್ಕೆ ಪ್ರತಿಯೊಬ್ಬರೂ ಸಾರ್ವತ್ರಿಕವಾಗಿ ಬದ್ದತೆ ತೋರಬೇಕು.ಜಲ ಸಂಪತ್ತು ಋತುಮಾನಗಳ ತಾಪಮಾನ ಇಳಿಸಬಲ್ಲ ತಾಕತ್ತು ಹೊಂದಿದೆ. ಆ ಕಾರಣ ಜಲ ಸಂಪತ್ತು ದುರ್ಬಳಕೆ ಮಾಡಿಕೊಳ್ಳದೇ ಮಿತವಾಗಿ ಬಳಿಸಿ ಉಳಿಸಿಕೊಳ್ಳುವ ಸಂಕಲ್ಪವನ್ನು ನಾವುಗಳು ಮಾಡಬೇಕು ಎಂದರು.
ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನಾಗರಾಜ ಪಟ್ಟಣಶೆಟ್ಟಿ, ನಿವೃತ್ತ ತಹಶೀಲ್ದಾರ ರಾಮಚಂದ್ರ ಎಂ.ಆರ್, ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ವೀರಣ್ಣ ಕೋನಾ ಹಾಗೂ ಶ್ರೀಮತಿ ಶ್ರೀರಕ್ಷಾ ಎಂ.ಆರ್.ದಂಪತಿಗಳಿಗೆ ಸೇರಿದಂತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗಣ್ಯರನ್ನು ಶಾಲೆ,ಸಂಸ್ಥೆಯ ಪರವಾಗಿ ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಅವರು ಶಾಲು ಹೊದಿಸಿ ಸನ್ಮಾನಿಸಿ ಅತಿಥಿ ಸತ್ಕಾರ ನೀಡಿದರು. ಚಿತ್ರಕಲಾ ಸ್ಪರ್ಧೆಯಲ್ಲಿ ಮಕ್ಕಳು ಉತ್ಸಾಹದಿಂದ ಭಾಗಿಯಾಗಿ ಜಲ ಸಂರಕ್ಷಣೆ ಚಿತ್ತಾರ ಕುಂಚ,ಬಣ್ಣದ ಲೇಪನದಿಂದ ಮೂಡಿಸಿದರು. ಹಿರಿಯ ಶಿಕ್ಷಕ ಎನ್.ಎಸ್.ಬಿರಾದಾರ, ಎಸ್.ಎಚ್.ನಾಗಣಿ, ಆರ್.ಎಂ.ರಾಠೋಡ, ಶ್ರೀಧರ ಚಿಮ್ಮಲಗಿ ಇತರರಿದ್ದರು. ಗುಲಾಬಚಂದ ಜಾಧವ ಸ್ವಾಗತಿಸಿ ನಿರೂಪಿಸಿದರು. ಎಲ್.ಆರ್.ಸಿಂಧೆ ವಂದಿಸಿದರು.



