ಬೆಂಗಳೂರು: ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಂಸ್ಥೆ ಸಿಂಗಪುರದಲ್ಲಿ “ಎರಡನೇ ವಿಶ್ವ ಕನ್ನಡ ಹಬ್ಬ”ವನ್ನು ಆಯೋಜನೆ ಮಾಡಲಾಗಿದ್ದು, ಕನ್ನಡ ನಾಡು ನುಡಿ, ಸಾಹಿತ್ಯ, ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸುವ ಈ ಕಾರ್ಯಕ್ರಮದ ದಿವ್ಯ ವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಶ್ರೀಶ್ರೀ ರವಿಶಂಕರ್ ಗುರೂಜಿಯವರಲ್ಲಿ ಭಕ್ತಿಪೂರ್ವಕ ಮನವಿ ಮಾಡಿದರು.
ಆಧ್ಯಾತ್ಮಿಕ ನಾಯಕರಾಗಿರುವ ಇವರು, ಬೆಂಗಳೂರಿನಲ್ಲಿ ‘ಆರ್ಟ್ ಆಫ್ ಲಿವಿಂಗ್’ ಎಂಬ ಅಂತಾರಾಷ್ಟ್ರೀಯ ಸಂಸ್ಥೆಯನ್ನು ಸ್ಥಾಪನೆ ಮಾಡಿದ್ದಾರೆ. ಆರ್ಟ್ ಆಫ್ ಲಿವಿಂಗ್ ಪ್ರತಿಷ್ಠಾನವು ವೈಯಕ್ತಿಕ ಒತ್ತಡ, ಸಾಮಾಜಿಕ ಸಮಸ್ಯೆಗಳು ಮತ್ತು ಹಿಂಸಾಚಾರವನ್ನು ಶಮನಗೊಳಿಸುವ ಗುರಿಯನ್ನು ಹೊಂದಿದೆ. ರವಿಶಂಕರ್ ಗುರೂಜಿಯವರನ್ನು ಸರಳವಾಗಿ “ಶ್ರೀ, ಶ್ರೀ”, ಗುರುದೇವ್ ಎಂದು ಕರೆಯಲಾಗುತ್ತಿದೆ.
ಮಹಾನ್ ಜ್ಞಾನಿಗಳಾದ ಶ್ರೀ. ಶ್ರೀ. ಯವರಿಗೆ ವಿಶ್ವ ಕನ್ನಡ ಹಬ್ಬದ ಸಂಪೂರ್ಣ ರೂಪುರೇಶೆಗಳನ್ನು ವಿಶ್ವ ಕನ್ನಡ ಹಬ್ಬ ಕಾರ್ಯಕ್ರಮದ ‘ಸರ್ವಾಧ್ಯಕ್ಷ’ರಾದ ಡಾ. ಸಿ. ಸೋಮಶೇಖರ್ ರವರು ವಿವರಿಸಿದರು. ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಂಸ್ಥೆಯ ಮಹತ್ತರ ಸಾಧನೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಗುರೂಜಿಯವರು ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು, ಕನ್ನಡ ನಾಡು ನುಡಿಯನ್ನು ವಿದೇಶದಲ್ಲಿ ಪಸರಿಸಲು ಹೊರಟಿರುವ ಈ ಕಾರ್ಯಕ್ರಮಕ್ಕೆ ನನ್ನ ಆಶೀರ್ವಾದವಿದ್ದು, ಕಾರ್ಯಕ್ರಮಕ್ಕೆ ಆಗಮಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷ ಶಿವಕುಮಾರ್ ನಾಗರ ನವಿಲೆ, ದಿನೇಶ್ ಜೋಶಿ, ಪ್ರತಿಭಾ ಪಟವರ್ಧನ್, ಗುಣವಂತ ಮಂಜು, ರಂಜಿತಾ ರವರು ಮುಂತಾದವರು ಜೊತೆಗಿದ್ದರು.