ಬ್ಲ್ಯಾಕ್ ಆಂಡ್ ವೈಟ್ ಯುಗದಿಂದ ಕಲರ್ವರೆಗೆ, ಕನ್ನಡ ಚಿತ್ರರಂಗದಲ್ಲಿ ಹತ್ತಾರು ಪ್ರಯೋಗಗಳನ್ನ ಮಾಡಿ.. ಗೆದ್ದು, ಬಿದ್ದು, ಎದ್ದು ಮತ್ತೆ ಬಿದ್ದ ದ್ವಾರಕೀಶ್, ರಾಜಕೀಯದಲ್ಲಿಯೂ ಕೂಡ ತಮ್ಮ ಅದೃಷ್ಟ ಪರೀಕ್ಷೆಯನ್ನ ಮಾಡಿಕೊಂಡಿದ್ದರು.ಹೌದು. ಸರಿಯಾಗಿ ಎರಡು ದಶಕದ ಹಿಂದೆ, ದ್ವಾರಕೀಶ್.. ಖಾದಿ ಬಟ್ಟೆ ಹಾಕಿಕೊಳ್ಳಲು ಮುಂದಾಗಿದ್ದರು. ಅದಕ್ಕೆ ಕಾರಣವಾಗಿದ್ದು ವಿಜಯ್ ಸಂಕೇಶ್ವರ ಅನ್ನುವುದು ವಿಶೇಷ. ಹೌದು, ನಿಮಗೆ ಗೊತ್ತಿರಲಿ..
2004ರಲ್ಲಿ ತಮಗೆ ಬಿಜೆಪಿಯಲ್ಲಿ ಅನ್ಯಾಯವಾಗುತ್ತಿದೆ ಎಂದು ಉದ್ಯಮಿ ಹಾಗೂ ವಿಆರ್ ಎಲ್ ಮಾಲೀಕ ವಿಜಯಸಂಕೇಶ್ವರ ಸಿಡಿದೆದ್ದಿದ್ದರು. ಪಕ್ಷ. ನಾಡು, ನುಡಿಗೆ ಸಂಬಂಧಿಸಿ ಕರ್ನಾಟಕಕ್ಕೆ ಪ್ರತ್ಯೇಕವಾಗಿ ಪಕ್ಷ ರೂಪಿಸಿ ಗೆದ್ದು ಅಧಿಕಾರ ಹಿಡಿಯಬೇಕು ಎಂದು ಕನಸನ್ನ ಕಂಡಿದ್ದರು. ತಮ್ಮ ಈ ಕನಸಿಗೆ ವಿಜಯ್ ಸಂಕೇಶ್ವರ ಅವರು ಅವತ್ತು ಇಟ್ಟಿದ್ದ ಹೆಸರು ಕನ್ನಡ ನಾಡು.
ಇದೇ ಕನ್ನಡ ನಾಡು ಪಕ್ಷಕ್ಕೆ ದ್ವಾರಕೀಶ್ ಬೆವರು ಸುರಿಸಿದ್ದರು. ಪಾರ್ಟಿಯ ಸಂಘಟನೆಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು. ಇಷ್ಟೇ ಅಲ್ಲ 2004ರ ವಿಧಾನಸಭಾ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಕನ್ನಡ ನಾಡು ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ವಿಶೇಷ ಅಂದರೆ ಇದೇ ವರ್ಷ, ದ್ವಾರಕೀಶ್ ಪ್ರತಿ ಬಾರಿ ಆರ್ಥಿಕವಾಗಿ ಪೆಟ್ಟು ತಿಂದು, ಸಪ್ಪಗೆ ಕೂತಾಗ ಪದೇ ಪದೇ ಬಂದು ಕೈ ಹಿಡಿಯುತ್ತಿದ್ದ ಸಾಹಸಸಿಂಹ ವಿಷ್ಣುವರ್ಧನ್ ಮತ್ತೊಮ್ಮೆ ದ್ವಾರಕೀಶ್ ಕೈ ಹಿಡಿದಿದ್ದರು. ಆಪ್ತಮಿತ್ರ ಚಿತ್ರವನ್ನ ಒಪ್ಪಿಕೊಂಡು ಚಿತ್ರೀಕರಣವನ್ನೂ ಆರಂಭಿಸಿದ್ದರು.
2004ರ ವಿಧಾನ ಸಭಾ ಚುನಾವಣೆಗೆ ದ್ವಾರಕೀಶ್ ನಾಮ ಪತ್ರ ಸಲ್ಲಿಸುವಾಗ ಕೂಡ ವಿಷ್ಣು ಜೊತೆಯಲ್ಲಿಯೇ ಇದ್ದರು. ಒಂದು ಕಡೆ ಆಪ್ತಮಿತ್ರ ಚಿತ್ರದ ಚಿತ್ರೀಕರಣ.. ಮತ್ತೊಂದು ಕಡೆ ರಾಜಕಾರಣ.. ದ್ವಾರಕೀಶ್ ಎರಡು ದೋಣಿಯ ಮೇಲೆ ಕಾಲಿಟ್ಟಿದ್ದರು. ಹಳ್ಳಿ..ಹಳ್ಳಿ.. ಸುತ್ತಾಡಿದರು. ತಮ್ಮ ಹುಟ್ಟೂರಾದ ಹುಣಸೂರಿನಲ್ಲಿ ಅದ್ಧೂರಿಯಾದ ಪ್ರಚಾರವನ್ನೂ ಮಾಡಿದರು. ಜನ ಕೂಡ ಅಷ್ಟೇ ಪ್ರೀತಿಯಿಂದ ಸ್ವಾಗತಿಸಿದರು ಕೂಡ. ಈ ಕಾರಣಕ್ಕೆ.. ಗೆದ್ದೇ ಗೆಲ್ಲುವ ವಿಶ್ವಾಸ ದ್ವಾರಕೀಶ್ ಅವರಲ್ಲಿ ಹೆಚ್ಚಿತ್ತು. ರಾಜಕೀಯ ನೇತಾರರ ನಂಟು ಇರಬಹುದು. ಆದರೆ ರಾಜಕೀಯ ನನಗೆ ಹೊಸದು.
ನಾಡು, ನುಡಿಯ ಆಶಯದೊಂದಿಗೆ ಸಂಕೇಶ್ವರ ಅವರ ಕಟ್ಟಿದ ಈ ಪಕ್ಷ ಜನಹಿತದೊಂದಿಗೆ ಕೆಲಸ ಮಾಡಲಿದೆ ಎಂದು ದ್ವಾರಕೀಶ್ ಅವರು ಅವತ್ತು ಹೇಳಿದ ಮಾತಾಗಿತ್ತು.ಆದರೆ, ದ್ವಾರಕೀಶ್ ಅಂದುಕೊಂಡಿದ್ದು ಒಂದು ಆಗಿದ್ದು ಇನ್ನೊಂದು. ಜೆಡಿಎಸ್ನ ಜಿ.ಟಿ.ದೇವೇಗೌಡ ಅವರು 60,258 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ದ್ವಾರಕೀಶ್ 2,265 ಮತಗಳನ್ನು ಪಡೆದು ಸೋಲು ಕಂಡಿದ್ದರು. ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಎಸ್.ಚಿಕ್ಕಮಾದು, ಬಿಜೆಪಿಯ ಮರಿಲಿಂಗಯ್ಯ, ರೈತಸಂಘದ ಹೊಸೂರು ಕುಮಾರ್ ಸೋತಿದ್ದರು.
ಇದೇ ಮೊದಲು ಹಾಗೂ ಕೊನೆ.. ದ್ವಾರಕೀಶ್ ರಾಜಕೀಯದ ಕಡೆ ಮತ್ತೆ ಮುಖ ಮಾಡಲಿಲ್ಲ. ಚಿತ್ರರಂಗಕ್ಕೆ ಮರಳಿ ಬಂದರು. ಇನ್ನೂ ರಾಜಕೀಯದಲ್ಲಿ ಸೋಲು ಅನುಭವಿಸಿದ್ದರು, ಆಪ್ತಮಿತ್ರ ಮೂಲಕ ಭರ್ಜರಿ ಗೆಲುವನ್ನ ದ್ವಾರಕೀಶ್ ಕಂಡಿದ್ದರು. ಆದರೆ.. ಆ ನಂತರ ದ್ವಾರಕೀಶ್ ಹಾಗೂ ವಿಷ್ಣುವರ್ಧನ್ ನಡುವೆ ಮತ್ತೆ ಬ್ರೇಕಪ್ ಆಯಿತು. ಒಂದಾಗುತ್ತಾರೆ ಅನ್ನುವಷ್ಟರಲ್ಲಿ ಸಿಂಹ ಮರಳಿ ಬಾರದ ದಾರಿಯಲ್ಲಿ ಎದ್ದು ನಡೆಯಿತು. ಈಗ ದ್ವಾರಕೀಶ್ ಕೂಡ ನಮ್ಮ ನಡುವೆ ಇಲ್ಲ.