ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಭಾರತಕ್ಕೆ ಬಂದಿದ್ದಾರೆ. ಕಳೆದ 34 ದಿನಗಳಿಂದ ಜರ್ಮನಿಯಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಅವರು ಕಳೆದ ಮಧ್ಯರಾತ್ರಿ ಬೆಂಗಳೂರಿನ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು.
ಪ್ರಜ್ವಲ್ ರೇವಣ್ಣ ಅವರು ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಎಸ್ಐಟಿ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿಮಾನ ನಿಲ್ದಾಣದ ಹಿಂದಿನ ಗೇಟ್ ಮೂಲಕ ಪ್ರಜ್ವಲ್ ರೇವಣ್ಣ ಅವರನ್ನು ಹೊರಗೆ ಕರೆತರಲಾಗಿದೆ.ಪ್ರಜ್ವಲ್ ರೇವಣ್ಣ ವಿಮಾನ ಇಳಿದು ಇಮಿಗ್ರೇಷನ್ ಸಾಲಿನಲ್ಲಿ ಬರುತ್ತಿದ್ದನ್ನು ಗಮನಿಸಿದ್ದ ಇಮಿಗ್ರೇಷನ್ ಅಧಿಕಾರಿಗಳು ಕೂಡಲೇ ಅವರನ್ನು ಪಕ್ಕಕ್ಕೆ ಬರಲು ಹೇಳಿದ್ದಾರೆ.
ಆಗ ನೀವು ನನ್ನನ್ನು ಮುಟ್ಟಬೇಡಿ, ನಾನೇ ಬರುತ್ತೇನೆ ಎಂದು ಖುದ್ದಾಗಿ ನಾನೇ ಬರುತ್ತೇನೆ ಎಂದು ಅಧಿಕಾರಿಗಳ ಕಾರ್ಯಾಚರಣೆಗೆ ಸಹಕರಿಸಿದ್ದಾರೆ. ಇಮಿಗ್ರೇಷನ್ ಅಧಿಕಾರಿಗಳು ಪ್ರಜ್ವಲ್ ಅವರನ್ನು ತಪಾಸಣೆ ನಡೆಸಿದ ನಂತರ ಎಸ್ಐಟಿ ವಶಕ್ಕೆ ನೀಡಿದ್ದಾರೆ.ಪ್ರಜ್ವಲ್ ಬಳಿಯಿದ್ದ ಮೊಬೈಲ್ ಮತ್ತು ಪಾಸ್ಪೋರ್ಟ್ನ್ನು ವಶಪಡಿಸಿಕೊಂಡ ಎಸ್ಐಟಿ ಅಧಿಕಾರಿಗಳು ತದನಂತರ ಅವರನ್ನು ಎಸ್ಐಟಿ ಕಚೇರಿಗೆ ಕರೆತಂದಿದ್ದಾರೆ.
ಎಸ್ಐಟಿ ಅಧಿಕಾರಿಗಳ ವಶದಲ್ಲೇ ಇದ್ದ ಪ್ರಜ್ವಲ್ ಅವರ ಪರ ವಕೀಲರೆನ್ನಲಾದ ಅರುಣ್ ಎಂಬುವರು ಸಂಪರ್ಕಿಸಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ತದನಂತರ ಮಾಧ್ಯಮದವರೊಂದಿಗೆ ಮಾತನಾಡಿದ ವಕೀಲ ಅರುಣ್,ಪ್ರಜ್ವಲ್ ಅವರನ್ನು ಬಂಧಿಸಲಾಗಿದೆ. ಎಸ್ಐಟಿ ಅವರ ತನಿಖೆಗೆ ಪ್ರಜ್ವಲ್ ಸಹಕಾರ ನೀಡುತ್ತಿದ್ದಾರೆ. ಅವರನ್ನು ನ್ಯಾಯಾಯಲದ ಮುಂದೆ ಹಾಜರುಪಡಿಸಿದ್ದಕ್ಕೆ ನಮ್ಮ ಕಾರ್ಯವನ್ನು ನ್ಯಾಯಾಲಯದಲ್ಲೇ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಇಂದು ಬೆಳಿಗ್ಗೆ 10.30ರ ನಂತರ ಪ್ರಜ್ವಲ್ ಅವರನ್ನು ಬೋರಿಂಗ್ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ತದನಂತರ ಅವರನ್ನು ಮಧ್ಯಾಹ್ನದ ವೇಳೆಗೆ ಸಿವಿಲ್ ಕೋರ್ಟ್ನಲ್ಲಿ ಹಾಜರು ಪಡಿಸಲಾಗುವುದು ಎಂದು ಎಸ್ಐಟಿ ಮೂಲಗಳು ತಿಳಿಸಿವೆ.