ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಸುದ್ದಿಗೋಷ್ಠಿ ನಡೆಸಿ, ದ್ವೀತಿಯ ಪಿಯುಸಿ ಫಲಿತಾಂಶದಲ್ಲಿ ಶೇ97ರಷ್ಟು ತೇರ್ಗಡೆಯೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಶೇ.96.80ರಷ್ಟು ಫಲಿತಾಂಶದೊಂದಿಗೆ ಉಡುಪಿ ಜಿಲ್ಲೆಗೆ ಎರಡನೇ ಸ್ಥಾನದಲ್ಲಿದ್ದರೇ, ಶೇ.94.89ರಷ್ಟು ಫಲಿತಾಂಶದೊಂದಿಗೆ ವಿಜಯಪುರ ಜಿಲ್ಲೆಗೆ 3ನೇ ಸ್ಥಾನದಲ್ಲಿವೆ ಎಂದು ತಿಳಿಸಿದ್ದಾರೆ.
ಮಾ.1ರಿಂದ ಮಾರ್ಚ್ 22ರವರೆಗೆ ನಡೆದಿದ್ದ 2024ನೇ ಸಾಲಿನ ಪಿಯುಸಿ ಪರೀಕ್ಷೆಯನ್ನು ಒಟ್ಟು 6.9 ಲಕ್ಷ ವಿದ್ಯಾರ್ಥಿಗಳು ಬರೆದಿದ್ದರು. ಈ ಪೈಕಿ 3.3 ಲಕ್ಷ ವಿದ್ಯಾರ್ಥಿಗಳು, 3.6 ಲಕ್ಷ ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು. ಮೂರು ಭಾಗಗಳಲ್ಲಿ ದ್ವಿತೀಯ ಪರೀಕ್ಷೆ ನಡೆಸಲಾಗಿತ್ತು. ಪ್ರಸಕ್ತ ವರ್ಷದ ಶೇಕಡಾ ವಾರು ಫಲಿತಾಂಶ ಶೇ 81.15 ರಷ್ಟು ಆಗಿದೆ.
2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 1,28,448 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 1,74,315 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೇ, ವಿಜ್ಞಾನ ವಿಭಾಗದಲ್ಲಿ 2,49,927 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.ಅಧಿಕೃತ ವೆಬ್ಸೈಟ್ನಲ್ಲಿ ಫಲಿತಾಂಶ ಪ್ರಕಟವಾಗುತ್ತಿದ್ದು, ವಿದ್ಯಾರ್ಥಿಗಳು ಲಾಗಿನ್ ಕ್ರೆಡೆನ್ಶಿಯಲ್ಸ್ ನಮೂದಿಸುವ ಮೂಲಕ ಪಿಯು ಮಂಡಳಿಯ ಅಧಿಕೃತ ವೆಬ್ಸೈಟ್ karresults.nic.in ಮತ್ತು pue.kar.nic ಮೂಲಕ ದ್ವಿತೀಯ ಪಿಯು ಫಲಿತಾಂಶಗಳನ್ನು ಪರಿಶೀಲಿಸಬಹುದಾಗಿದೆ. ಫಲಿತಾಂಶದಲ್ಲಿ ಎಂದಿನಂತೆ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.