ಬೆಂಗಳೂರು: ಕೇಂದ್ರದ ಜತೆ ಸಂಘರ್ಷಕ್ಕಿಳಿಯುವ ಉದ್ದೇಶ ರಾಜ್ಯಸರ್ಕಾರಕ್ಕಿಲ್ಲ ಎಂದು ಸ್ಪಷ್ಟಗೊಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಬರಗಾಲಕ್ಕಿಡಾಗಿರುವ ರಾಜ್ಯಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಆದರೆ ಕೇಂದ್ರದಿಂದ ಇದುವರೆಗೆ ನಯಾಪೈಸೆ ಬಿಡುಡಗೆಯಾಗಿಲ್ಲ ಎಂದು ವಿಧಾನಸಭೆಯಲ್ಲಿ ಹೇಳಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿಯವರು ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿದೆ. 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ರಾಜ್ಯದ ನೆರವಿಗೆ ಬರಬೇಕು ಹಾಗೂ ಪರಿಹಾರ ಹಣ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ನಾನೇ ಖುದ್ದಾಗಿ ಭೇಟಿ ಮಾಡಿ ಮನವಿ ಮಾಡಿದ್ದೇನೆ. ಆದರೆ ಕೇಂದ್ರ ನಮ್ಮ ಮನವಿಗಳಿಗೆ ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮನರೇಗ ಯೋಜನೆಯಡಿ ದುಡಿಯುವ ಕೈಗಳಿಗೆ ಕೆಲಸ ಕೊಡುವ ಮಾನವ ದಿನಗಳನ್ನು 100ರಿಂದ 150ಕ್ಕೆ ಹೆಚ್ಚಿಸಬೇಕು ಎಂದು ಪದೇ ಪದೇ ಮನವಿ ಮಾಡಿದರೂ ಕೇಂದ್ರದಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಸಹ ಈ ಸಂಬಂಧ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಒಟ್ಟಾರೆ ಕರ್ನಾಟಕದಿಂದ ಕೇಂದ್ರ ಸರ್ಕಾರಕ್ಕೆ ನೆರವು ಕೋರಿ 17 ಪತ್ರಗಳನ್ನು ಬರೆಯಲಾಗಿದೆ. ಕೇವಲ ಒಂದು ಪತ್ರಕ್ಕೆ ಮಾತ್ರ ಅಮಿತ್ ಶಾ ಪ್ರತಿಕ್ರಿಯಿಸಿದ್ದಾರೆ. ಉಳಿದ 16ಕ್ಕೆ ಉತ್ತರ ಬಂದಿಲ್ಲ ಎಂದರು.
ನಮಗೆ ನ್ಯಾಯಕೊಡಿ ಎಂದು ಕೇಳುವುದು ತಪ್ಪಾ? ಎಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ ಮುಖ್ಯಮಂತ್ರಿಗಳು ರಾಜ್ಯದ ತೆರಿಗೆ ಹಣದ ಪೈಕಿ ನಮ್ಮ ಪಾಲನ್ನು ಕೊಡಬೇಕು ಎಂದು ಒತ್ತಾಯ ಮಾಡಲಾಗಿದೆ. ಇದಕ್ಕು ಸ್ಪಂದಿಸುತ್ತಿಲ್ಲ.ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಪ್ರತಿಪಕ್ಷಗಳ ಟೀಕೆಗಳಲ್ಲಿ ಹುರುಳಿಲ್ಲ ಎಂದ ಅವರು, ಕಾನೂನು ಸುವ್ಯವಸ್ಥೆ ಚೆನ್ನಾಗಿರುವುದರಿಂದಲೇ 77 ಸಾವಿರ ಕೋಟಿ ರೂ. ಬಂಡವಾಳ ಹರಿದುಬಂದಿದೆ ಎಂದು ತಿಳಿಸಿದರು.
ರಾಜ್ಯಪಾಲರ ಭಾಷಣವನ್ನು ಬಲವಾಗಿ ಸಮರ್ಥಿಸಿಕೊಂಡ ಮುಖ್ಯಮಂತ್ರಿಯವರು ಭಾಷಣದಲ್ಲಿ ಸುಳ್ಳುಗಳಲ್ಲಿದ್ದರೆ ಬೊಟ್ಟು ಮಾಡಿ ತೋರಿಸಿ ಎಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.