ಚನ್ನಪಟ್ಟಣ: ರೈತರಿಗೆ ವರದಾನವಾಗಿರುವ ಹೈನೋದ್ಯಮವನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಪ್ರಗತಿ ಸಾಧಿಸಿ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಕರೆ ನೀಡಿದರು.ತಾಲೂಕಿನ ಸೀಬನಹಳ್ಳಿ ಗ್ರಾಮದಲ್ಲಿ ಸೀಬನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿ, ರೈತರಿಗೆ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗದೆ ನಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ ರೈತರನ್ನು ಹೈನೋದ್ಯಮ ಕೈ ಹಿಡಿದಿದೆ. ಹೈನೋದ್ಯಮದಲ್ಲಿ ತೊಡಗಿರುವ ರೈತರು ಬಮೂಲ್ ಮತ್ತು ಬಿಡಿಸಿಸಿ ಬ್ಯಾಂಕ್ನ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡು ಹೈನೋದ್ಯಮದಲ್ಲಿ ಪ್ರಗತಿ ಸಾಧಿಸಿ ಆರ್ಥಿಕವಾಗಿ ಸಬಲರಾಗಬೇಕು ಎಂದು ಕರೆ ನೀಡಿದರು.ಹೈನೋದ್ಯಮದ ಮೂಲಕ ತಾವು ಲಾಭ ಮಾಡಿಕೊಳ್ಳುವ ಜೊತೆಗೆ ಸಂಘದ ಅಭಿವೃದ್ಧಿಗೆ ಸಹಕಾರ ನೀಡಿರುವ ಎಲ್ಲಾ ಸದಸ್ಯರ ಕಾರ್ಯದಿಂದ ಇಂದು ನೂತನ ಕಟ್ಟಡ ನಿರ್ಮಾಣಕ್ಕೆ ಸಹಕಾರಿಯಾಗಿದೆ. ಹೈನೋದ್ಯಮಕ್ಕಾಗಿ ರೈತರಿಗೆ ಬಮೂಲ್ನಿಂದ ನೀಡುವ ಸಬ್ಸಿಡಿ ಸೌಲಭ್ಯಗಳನ್ನು ಸುದುಪಯೋಗ ಮಾಡಿಕೊಂಡು ಗುಣಮಟ್ಟದ ಹಾಲನ್ನು ಸಂಘಕ್ಕೆ ಸರಬರಾಜು ಮಾಡಿ ಎಂದು ಸಿಪಿವೈರು ತಿಳಿಸಿದರು.ರಾಜ್ಯಕ್ಕೆ ಅತೀ ಹೆಚ್ಚು ಹಾಲನ್ನು ಸರಬರಾಜು ಮಾಡುವ ನಿಟ್ಟಿನಲ್ಲಿ ತಾಲೂಕು 2 ನೇ ಸ್ಥಾನದಲ್ಲಿದ್ದು ದಿನ 3.20 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡಿ ಸರಬರಾಜು ಮಾಡುತ್ತಿದೆ. ಇದೇ ನಿಟ್ಟಿನಲ್ಲಿ ಹಾಲಿನ ಉತ್ಪಾದನೆಗೆ ಮತ್ತಷ್ಟು ಪೂರಕ ವಾತಾವರಣ ನಿರ್ಮಾಣ ಮಾಡಲು ಒಂದೆಡೆ ಸತ್ತೇಗಾಲ ಯೋಜನೆ ಶೀಘ್ರದಲ್ಲೇ ಪೂರ್ಣವಾಗಿ ತಾಲೂಕಿನಲ್ಲಿ ಶಾಶ್ವತ ನೀರಾವರಿ ಆಗಲಿದೆ. ಜೊತೆಗೆ ರೈತರಿಗೆ ಬಿಡಿಸಿಸಿ ಬ್ಯಾಂಕ್ ವತಿಯಿಂದ ಎರಡು ಹಸು ಖರೀದಿಗೆ 1.80 ಲಕ್ಷ ರೂ. ಸಾಲ ಸೌಲಭ್ಯ ನೀಡಲಾಗುತ್ತಿದ್ದು, ರೈತರು ಈ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಿ. ಜೊತೆಗೆ ಯುವ ರೈತರು ಮಿನಿ ಡೈರಿ ಮಾಡಲು ವಾರ್ಷಿಕ ಶೇ.5% ಬಡ್ಡಿಯಲ್ಲಿ 15 ಲಕ್ಷ ರೂ. ಸಾಲ ಸೌಲಭ್ಯ ನೀಡಲಾಗುತ್ತಿದ್ದು, ಈ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಿ ಎಂದು ಸಿ.ಪಿ. ಯೋಗೇಶ್ವರ್ ಕರೆ ನೀಡಿದರು.ಬಮೂಲ್ ಮತ್ತು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್. ಲಿಂಗೇಶ್ಕುಮಾರ್ ಅವರು ಮಾತನಾಡಿ, ಇಂದು ಯುಗಾದಿ ಹಬ್ಬಕ್ಕಾಗಿ ರೈತರಿಗೆ ಪ್ರತಿ ಲೀ. ಹಾಲಿಗೆ 1 ರೂ ನಂತೆ ಬೋನಸ್ ನೀಡಲಾಗುತ್ತಿದ್ದು. ಇದು ನಮ್ಮ ಅಧ್ಯಕ್ಷರಾದ ಡಿ.ಕೆ.ಸುರೇಶ್ಅವರ ಆಡಳಿತದ ಕಾರ್ಯವೈಖರಿಯ ಫಲ ಮತ್ತು ಹಾಲು ಉತ್ಪಾದಕ ರೈತರ ಶ್ರಮದ ಫಲವಾಗಿದೆ. ಇದೇ ನಿಟ್ಟಿನಲ್ಲಿ ಗುಣಮಟ್ಟದ ಹಾಲನ್ನು ಸರಬರಾಜು ಮಾಡಿ ಹೆಚ್ಚಿನ ಲಾಭಾಂಶ ಪಡೆದು ಬಮೂಲ್ ಮತ್ತು ಬಿಡಿಸಿಸಿ ಬ್ಯಾಂಕ್ನ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಕರೆ ನೀಡಿದರು.ಸಂದರ್ಭದಲ್ಲಿ ಡೈರಿಯ ಅಧ್ಯಕ್ಷರು, ನಿರ್ದೇಶಕರು ಹಾಗೂ ಸಿಬ್ಬಂದಿಗಳು ಇದ್ದರು. ಬಳಿಕ ತಾಲೂಕಿನ ಬಿ.ವಿ. ಪಾಳ್ಯ ಮತ್ತು ಹೊನ್ನಿಗನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಗಳ ನೂತನ ಕಟ್ಟಡವನ್ನು ಉದ್ಘಾಟನೆ ಮಾಡಲಾಯಿತು.



