ವಿಶಾಖಪಟ್ಟಣಂ: ಇಲ್ಲಿನ ಡಾ. ವೈಎಸ್ ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ಅ. ೧೨ರಂದು ನಡೆದ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ನ ೧೩ನೇ ಪಂದ್ಯದಲ್ಲಿ ಭಾರತ ತಂಡ ದಾಖಲಿಸಿದ್ದ ೩೩೦ ರನ್ ಗಳ ದೊಡ್ಡ ಮೊತ್ತವನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾದ ಆಸ್ಟ್ರೇಲಿಯಾ ಮಹಿಳೆಯರ ತಂಡ, ಪಂದ್ಯವನ್ನು ೩ ವಿಕೆಟ್ ಗಳ ಅಂತರದಲ್ಲಿ ಗೆಲ್ಲುವ ಮೂಲಕ ಮಹಿಳಾ ಏಕದಿನ ಕ್ರಿಕೆಟ್ ನಲ್ಲಿ ಹೊಸ ದಾಖಲೆಯನ್ನು ಬರೆದಿದೆ.
ಮಹಿಳಾ ಕ್ರಿಕೆಟ್ ನಲ್ಲಿ ತಂಡವೊAದು ಇಷ್ಟು ದೊಡ್ಡ ಮೊತ್ತವನ್ನು ಚೇಸ್ ಮಾಡಿ ಗೆದ್ದಿದ್ದು ಇದೇ ಮೊದಲು. ಆಸೀಸ್ ತಂಡದಿಂದ ಇಂಥದ್ದೊಂದು ದಾಖಲೆ
ಹೊರಹೊಮ್ಮಲು ಕಾರಣವಾಗಿದ್ದು ಆಸೀಸ್ ತಂಡದ ನಾಯಕಿ ಅಲಿಸಾ ಹೀಲೆ ಅವರ ಅಮೋಘ ಶತಕ (೧೪೨ ರನ್, ೧೦೭ ಎಸೆತ, ೨೧ ಬೌಂಡರಿ, ೩ ಸಿಕ್ಸರ್) ಕಾರಣ. ಆರಂಭಿಕರಾಗಿ ಕ್ರೀಸ್ ಗೆ ಇಳಿದಿದ್ದ ಅವರು, ಇನಿಂಗ್ಸ್ ನ ೩೯ನೇ ಓವರಿನವರೆಗೂ ಗಟ್ಟಿಯಾಗಿ ನಿಂತು ತಂಡದ ಗೆಲುವಿನ ದಡದತ್ತ ಕೊಂಡೊಯ್ಯುವಲ್ಲಿ ದೊಡ್ಡ ಪಾತ್ರ ನಿರ್ವಹಿಸಿದರು. ಅವರ ದಿಟ್ಟ ಬ್ಯಾಟಿಂಗ್ ನಿಂದಾಗಿ ಮಧ್ಯಮ ಕ್ರಮಾಂಕದ ಬ್ಯಾಟ್ ವುಮನ್ ಗಳು ಬೇಗನೇ ನಿರ್ಗಮಿಸಿದರೂ ಆಸೀಸ್ ತಂಡ ಗೆಲುವು ಪಡೆಯುವಲ್ಲಿ ಯಶಸ್ವಿಯಾಯಿತು.
ಮೊದಲು ಬ್ಯಾಟ್ ಮಾಡಿದ್ದ ಭಾರತ ೪೮.೫ ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ೩೧೦ ರನ್ ಮಾಡಿತ್ತು. ಆರಂಭಿಕ ಆಟಗಾರ್ತಿಯರಾದ ಪ್ರತೀಕಾ
ರಾವಲ್ (೭೫ ರನ್, ೯೬ ಎಸೆತ, ೧೦ ಬೌಂಡರಿ, ೧ ಸಿಕ್ಸರ್), ಸ್ಮೃತಿ ಮಂದಾನಾ (೮೦ ರನ್, ೬೬ ಎಸೆತ, ೯ ಬೌಂಡರಿ, ೩ ಸಿಕ್ಸರ್) ಗಳಿಸಿ ತಂಡದ ಇನಿಂಗ್ಸ್ ಗೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆನಂತರದ ಬ್ಯಾಟ್ಸ್ ವುಮನ್ ಗಳಲ್ಲಿ ಹರ್ಲಿನ್ ದೇವಲ್ (೩೮), ನಾಯಕಿ ಹರ್ಮನ್ ಪ್ರೀತ್ ಕೌರ್
(೨೨), ಜೆಮಿಮಾ ರೊಡ್ರಿಗಸ್ (೩೩), ರಿಚಾ ಘೋಷ್ (೩೨) ಮುಂತಾದವರ ದೇಣಿಗೆಯಿAದ ೩೧೦ ರನ್ ಮೊತ್ತ ದಾಖಲಿಸಿತ್ತು.
ಸ್ಮೃತಿ ಮಂದಾನಾ ಎರಡು ದಾಖಲೆ ಈ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿದ ಸ್ಮೃತಿ ಮಂದಾನ ಅವರು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅವರು ಈವರೆಗೆ ಯಾರೂ ಮಾಡದ ಸಾಧನೆ ಮಾಡಿದ್ದು, ಏಕದಿನ ಕ್ರಿಕೆಟ್ನಲ್ಲಿ ಕ್ಯಾಲೆಂಡರ್ ವರ್ಷವೊಂದರಲ್ಲಿ ೧೦೦೦ ರನ್ಗಳ ಗಡಿ ದಾಟಿದ ಮೊದಲ ಮಹಿಳಾ ಕ್ರಿಕೆಟರ್ ಎನಿಸಿಕೊಂಡಿದ್ದಾರೆ. ಸ್ಮೃತಿ ಅವರು ಕೇವಲ ೧೮ ಪಂದ್ಯಗಳಲ್ಲಿ ಈ ಮೈಲಿಗಲ್ಲು ತಲುಪಿದ್ದು, ಇದರ ಜೊತೆಗೆ ಏಕದಿನ ಕ್ರಿಕೆಟ್ನಲ್ಲಿ ೫೦೦೦ ರನ್ ಗಳಿಸಿದ ಭಾರತದ ೨ನೇ ಮತ್ತು ವಿಶ್ವದ ೫ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.