ಗುವಾ: ಟಿ20 ವಿಶ್ವಕಪ್ 2024 ರಲ್ಲಿ ನಮೀಬಿಯಾವನ್ನು 9 ವಿಕೆಟ್ ಗಳಿಂದ ಭರ್ಜರಿಯಾಗಿ ಸೋಲಿಸಿದ ಆಸ್ಟ್ರೇಲಿಯಾ ಸೂಪರ್ 8 ಕ್ಕೆ ಲಗ್ಗೆಯಿಟ್ಟಿದೆ.
ಮೊದಲು ಬ್ಯಾಟಿಂಗ್ ಮಾಡಿದ ನಮೀಬಿಯಾ 17 ಓವರ್ ಗಳಲ್ಲೇ 72 ರನ್ ಗಳಿಗೆ ಆಲೌಟ್ ಆಯಿತು. ನಾಯಕ ಗೆರ್ಹಾರ್ಡ್ ಎರಾಸ್ಮಸ್ 36 ರನ್ ಮತ್ತು ಆರಂಭಿಕ ಮೈಕಲ್ ವಾನ್ ಲಿಂಗೆನ್ 10 ರನ್ ಗಳಿಸಿದ್ದು ಬಿಟ್ಟರೆ ಉಳಿದೆಲ್ಲರದ್ದು ಏಕಂಕಿ ಕೊಡುಗೆ.
ದುರ್ಬಲ ನಮೀಬಿಯಾ ವಿರುದ್ಧ ಮಾರಕ ದಾಳಿ ನಡೆಸಿದ ಆಡಂ ಝಂಪಾ 4 ವಿಕೆಟ್ ಕಬಳಿಸಿದರೆ ಜೋಶ್ ಹೇಝಲ್ ವುಡ್, ಮಾರ್ಕ್ ಸ್ಟಾಯ್ನಿಸ್ ತಲಾ 2 ವಿಕೆಟ್ ತಮ್ಮದಾಗಿಸಿಕೊಂಡರು.ಈ ಮೊತ್ತ ಬೆನ್ನತ್ತಿದ ಆಸ್ಟ್ರೇಲಿಯಾ ಕೇವಲ 5.4 ಓವರ್ ಗಳಲ್ಲಿ ನೀರು ಕುಡಿದಷ್ಟೇ ಸಲೀಸಾಗಿ 74 ರನ್ ಗಳಿಸಿ ಗೆಲುವು ಕಂಡಿತು. ಆಸ್ಟ್ರೇಲಿಯಾ ಪರ ಆರಂಭಿಕ ಡೇವಿಡ್ ವಾರ್ನರ್ 20, ಟ್ರಾವಿಸ್ ಹೆಡ್ ಔಟಾಗದೇ 34, ಮಿಚೆಲ್ ಮಾರ್ಷ್ ಔಟಾಗದೇ 18 ರನ್ ಗಳಿಸಿದರು.
ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಈ ಟಿ20 ವಿಶ್ವಕಪ್ ನಲ್ಲಿ ಮೊದಲನೆಯ ತಂಡವಾಗಿ ಸೂಪರ್ 8 ಕ್ಕೆ ಲಗ್ಗೆಯಿಟ್ಟಿತು. ಬಿ ಗುಂಪಿನಲ್ಲಿ ತಾನಾಡಿದ 3 ಪಂದ್ಯಗಳ ಪೈಕಿ ಮೂರರಲ್ಲೂ ಗೆಲುವು ಕಂಡ ಆಸ್ಟ್ರೇಲಿಯಾ 6 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿ ಹೊರಹೊಮ್ಮಿದೆ.