ಬೇಲೂರು: ಕೃಷಿ ಇಲಾಖೆಯಲ್ಲಿ ನೀಡಲಾಗುತ್ತಿರುವ ವಿವಿಧ ಸೌಲಭ್ಯಗಳನ್ನು ರೈತರು ಪಡೆದುಕೊಳ್ಳಬೇಕೆಂದು ಕೃಷಿಇಲಾಖೆ ಸಹಾಯಕ ನಿರ್ದೇಶಕ ರಂಗಸ್ವಾಮಿ ತಿಳಿಸಿದರು.
ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು, ಕೃಷಿ ಇಲಾಖೆಯಲ್ಲಿ ವಿವಿಧ ಯೋಜನೆಯಡಿಯಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣಗಳು, ಕೃಷಿ ಸಂಸ್ಕರಣಾ ಘಟಕಗಳು (ರಾಗಿ ಕ್ಲೀನಿಂಗ್ ಯಂತ್ರ, ಹಿಟ್ಟಿನ ಗಿರಣಿ, ಮೆಣಸಿನಕಾಯಿ ಪುಡಿ ಮಾಡುವ ಯಂತ್ರ, ಕಬ್ಬಿನ ಜ್ಯೂಸ್ ತಯಾರಿಕೆ ಯಂತ್ರ, ಸಣ್ಣ ಎಣ್ಣೆ ಗಾಣ ಯಂತ್ರ) ಲಘು ನೀರಾವರಿ ಉಪಕರಣಗಳು ಹಾಗೂ ಕೃಷಿ ಪರಿಕರ ಹಾಗು ಬಿತ್ತನೆ ಬೀಜಗಳನ್ನು ಸೀಮಿತ ಅನುದಾನದಲ್ಲಿ ನೀಡಲಾಗುತ್ತಿದೆ.
ಈ ಸೌಲಭ್ಯಗಳನ್ನು ಪಡೆಯಲು ರೈತರು ಎಪ್.ಐಡಿ. ಮಾಡಿಸುವುದು ಖಡ್ಡಾಯವಾಗಿರುತ್ತದೆ, ಆದ್ದರಿಂದ ರೈತರು ತಮ್ಮ ವ್ಯಾಪ್ತಿಯಲ್ಲಿ ಬರುವ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಆಧಾರ್ ಕಾರ್ಡ್, ಪಹಣಿ, ಪಾಸ್ ಪುಸ್ತಕದ ಪ್ರತಿ, 20 ರೂ ಛಾಪಾ ಕಾಗದ, 2 ಪಾಸ್ ಪೋರ್ಟ್ ಸೈಜ್ ಫೋಟೋ ಮತ್ತು ಅರ್ಜಿಯನ್ನು ಸಲ್ಲಿಸುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಎಲ್-1 ದರಕ್ಕೆ, ಶೇ. 90 ರಷ್ಟು ಸಹಾಯಧನ ಮತ್ತು ಸಾಮಾನ್ಯ ವರ್ಗದ ರೈತರಿಗೆ ಶೇ.50 ರ ರಿಯಾಯಿತಿ ದರದಲ್ಲಿ ನೀಡಲಾಗುವುದು. ಸೌಲಭ್ಯಗಳನ್ನು ಕೆ-ಕಿಸಾನ್ ಆನ್ಲೈನ್ ಮೂಲಕ ಜೇಷ್ಠತೆ ಆಧಾರದಲ್ಲಿ ವಿತರಿಸಲಾಗುವುದು.
ಪಿ.ಎಂ.ಕಿಸಾನ್ ಯೋಜನೆಯಡಿ ಅರ್ಹ ಫಲಾನುಭವಿಗಳು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿರುತ್ತದೆ. ತಾಲ್ಲೂಕು ಪೂರ್ಣ ಪ್ರಮಾಣದಲ್ಲಿ ಬರಪೀಡಿತವಾಗಿದ್ದು, ರೈತರು ಬರಪರಿಹಾರ ಪಡೆಯಲು ಫ್ರೂಟ್ ಐಡಿ (ಎಫ್.ಐಡಿ) ಮಾಡಿಸುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿರುತ್ತಾರೆ.