ಬೆಂಗಳೂರು: ಕರ್ನಾಟಕದ ಲಕ್ಷ್ ಚೆಂಗಪ್ಪ ಮಂಗಳವಾರ ಅಖಿಲ ಭಾರತ ಸಬ್ ಜೂನಿಯರ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ 17 ವರ್ಷದೊಳಗಿವರ ಬಾಲಕರ ಸಿಂಗಲ್ಸ್ನಲ್ಲಿ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡರು.
ಫೈನಲ್ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಲಕ್ಷ್ ಅವರು 21-18, 8-21, 21-8ರಿಂದ ಉತ್ತರಖಂಡದ ಅಂಶ್ ನೇಗಿ ಅವರನ್ನು ಮಣಿಸಿದರು.15 ವರ್ಷದೊಳಗಿನವರ ಬಾಲಕಿಯರ ಸಿಂಗಲ್ಸ್ ಫೈನಲ್ನಲ್ಲಿ ಮೂರನೇ ಶ್ರೇಯಾಂಕದ ಕರ್ನಾಟಕದ ಹಿತೈಶ್ರೀ ರಾಜಯ್ಯ 21-16, 12-21, 9-21ರಿಂದ ದೆಹಲಿಯ ರಿಷಿಕಾ ನಂದಿ ವಿರುದ್ಧ ಸೋತು ರನ್ನರ್ ಅಪ್ ಆದರು.
ಕರ್ನಾಟಕದ ದೀಪಕ್ ರಾಜ್ ಅದಿತಿ ಮತ್ತು ಪೊನ್ನಮ್ಮ ಬಿ.ವಿ. ವೃದ್ಧಿ ಜೋಡಿಯು 17 ಮತ್ತು 15 ವರ್ಷದೊಳಗಿನವರ ಬಾಲಕಿಯರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
17 ವರ್ಷದೊಳಗಿನ ವಿಭಾಗದಲ್ಲಿ ಅವರು 21-10, 21-12 ರಿಂದ ತೆಲಂಗಾಣದ ಲಕ್ಷ್ಮಿ ರಿಧಿಮಾ ದೇವಿನೇನಿ ಮತ್ತು ಸರಾಯು ಸೂರ್ಯನೇನಿ ಅವರನ್ನು ಹಾಗೂ 15 ವರ್ಷದೊಳಗಿನ ವಿಭಾಗದಲ್ಲಿ 21-10, 21-8 ರಿಂದ ಚಂಡೀಗಢದ ಏಂಜೆಲ್ ಚೌಧರಿ ಮತ್ತು ಶುಭಾಂಗಿ ಚೌಧರಿ ಅವರನ್ನು ಮಣಿಸಿದರು.