ಬೆಂಗಳೂರು: ಕೇಪ್ ಜೂನಿಯರ್ ಎಫ್ಸಿ ತಂಡವು ಕೆಎಸ್ಎಫ್ಎ ಖೇಲೊ ಇಂಡಿಯಾ 13 ವರ್ಷದೊಳಗಿನ ಬಾಲಕಿಯರ ಫುಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಟೂರ್ನಿಯಲ್ಲಿ ಆಡಿರುವ ಎಲ್ಲಾ 10 ಪಂದ್ಯಗಳನ್ನು ಗೆದ್ದು, 30 ಪಾಯಿಂಟ್ ಸಂಪಾದಿಸಿರುವ ಕೇಪ್ ತಂಡವು ಟ್ರೋಫಿಯೊಂದಿಗೆ 50 ಸಾವಿರ ನಗದು ಬಹುಮಾನ ಪಡೆಯಿತು. 10 ಪಂದ್ಯಗಳ ಪೈಕಿ 7ರಲ್ಲಿ ಗೆದ್ದು, ಉಳಿದ ಮೂರರಲ್ಲಿ ಸೋತು 21 ಅಂಕ ಸಂಪಾದಿಸಿರುವ ಆಲ್ಕೆಮಿ ಇಂಟೆಲ್ ಎಫ್ಎ ತಂಡವು ರನ್ನರ್ಸ್ ಅಪ್ ಸ್ಥಾನ ಪಡೆಯಿತು.
ಈ ತಂಡಕ್ಕೆ ಟ್ರೋಫಿಯೊಂದಿಗೆ 30 ಸಾವಿರ ನಗದು ಬಹುಮಾನ ದೊರೆಯಿತು. ಕಲ್ಯಾಣನಗರದ ಕಿಕ್ಸ್ಟಾರ್ಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕೊನೆಯ ಪಂದ್ಯದಲ್ಲಿ ಕೇಪ್ ತಂಡವು 8-0ಯಿಂದ ಪರಿಕ್ರಮ ಎಫ್ಸಿ ತಂಡವನ್ನು ಸುಲಭವಾಗಿ ಮಣಿಸಿತು. ಕೇಪ್ನ ನಿಷ್ಕಾ ಚಾವ್ಲಾ ಮತ್ತು ನತಾನಿಯಾ ಪಾಲ್ಸನ್ ಹ್ಯಾಟ್ರಿಕ್ ಸಾಧನೆ ಮಾಡಿದರು.ಮತ್ತೊಂದು ಪಂದ್ಯದಲ್ಲಿ ಆಲ್ಕೆಮಿ ತಂಡವು 12-0ಯಿಂದ ಮಾತೃ ಪ್ರತಿಷ್ಠಾನ ತಂಡವನ್ನು ಮಣಿಸಿತು.