ಮುಳಬಾಗಿಲು: ಬೆಸ್ಕಾಂ ಕಂಪನಿಯು ವಿದ್ಯುತ್ ಸುರಕ್ಷತೆ ಬಗ್ಗೆ ಶಾಲಾ ಕಾಲೇಜು ಮಕ್ಕಳಲ್ಲಿಅರಿವು ಮೂಡಿಸಲು ಮತ್ತು ವಿದ್ಯುತ್ ಅಪಘಾತಗಳನ್ನು ತಡೆಗಟ್ಟಲು ಚಿತ್ರಕಲೆ, ಪ್ರಬಂಧ, ಭಾಷಣ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದು ವಿದ್ಯಾರ್ಥಿಗಳು ಈಸ್ಪರ್ಧೆಗಳಲ್ಲಿಭಾಗವಹಿಸಿ ಹೆಚ್ಚಿನ ಜ್ಞಾನವನ್ನು ಪಡೆಯಬೇಕೆಂದು ಬೆಸ್ಕಾಂನ ಎಇಇ ವಿ.ಎಂ.ರಮೇಶ್ ತಿಳಿಸಿದರು.
ನಗರದ ಗುರುಭವನದಲ್ಲಿ ಬೆಸ್ಕಾಂ ವತಿಯಿಂದ ವಿದ್ಯುಚ್ಛಕ್ತಿ ಸುರಕ್ಷತೆ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಸಂಬಂಧ ಏರ್ಪಡಿಸಿದ್ದ ಜಾಗೃತಿ ಹಾಗೂ ಪ್ರಬಂಧ ಸ್ಪರ್ಧೆ ಕಾರ್ಯಕ್ರಮದಲ್ಲಿಮಾತನಾಡಿ ವಿದ್ಯುತ್ ಸುರಕ್ಷತೆ ಬಗ್ಗೆ ವಿದ್ಯುತ್ ತಂತಿಗಳಿಂದ ದೂರವಿರಲು ಶಿಕ್ಷಕರು ಹಾಗೂ ಪೋಷಕರು ಮಾರ್ಗದರ್ಶನ ನೀಡಬೇಕು, ವಿದ್ಯುತ್ ಸ್ವಿಚ್ಗಳು ಹಾಗೂ ವಿದ್ಯುತ್ ಉಪಕರಣಗಳು ಮಕ್ಕಳ ಕೈಗೆ ಸಿಗದಂತೆ ನೋಡಿಕೊಳ್ಳಬೇಕು, ವೈರಿಂಗ್ ಕೆಲಸವನ್ನು ಸರಕಾರಿ ಲೈಸೆನ್ಸ್ ಹೊಂದಿದ ವಿದ್ಯುತ್ ಗುತ್ತಿಗೆದಾರರಿಂದ ಮಾಡಿಸಿಕೊಳ್ಳಬೇಕು, ವಿದ್ಯುತ್ ಸಂಪರ್ಕಕ್ಕೆ ಸೂಕ್ತ ಗ್ರೌಡಿಂಗ್ ವ್ಯವಸ್ಥೆ ಇರುವ ಬಗ್ಗೆ ನೋಡಿಕೊಳ್ಳಬೇಕು. ವಿದ್ಯುತ್ ಉಪಕರಣಗಳನ್ನು ಸುರಕ್ಷತೆಗಾಗಿ ನಿಯತಕಾಲಿಕವಾಗಿ ಪರೀಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು.
ಬಿಆರ್ ಸಿ ಕಚೇರಿಯ ಕ್ಷೇತ್ರ ಸಮನ್ವಯಕಾರಿ ಪಿ ಸೋಮೇಶ್ ಮಾತನಾಡಿ ತುಂಡಾಗಿ ಬಿದ್ದ ವಿದ್ಯುತ್ ತಂತಿಗಳನ್ನು ಮುಟ್ಟಬಾರದು. ತಕ್ಷಣ ಬೆಸ್ಕಾಂ ಸಹಾಯವಾಣಿ 1912ಗೆ ಕರೆ ಮಾಡಬೇಕು, ವಿದ್ಯುತ್ ಸ್ವಿಚ್ಗಳು ಹಾಗೂ ಉಪಕರಣಗಳನ್ನು ಒದ್ದೆ ಕೈಗಳಿಂದ ಮುಟ್ಟಬಾರದು. ತಂತಿ ಬೇಲಿಗಳಿಗೆ ವಿದ್ಯುತ್ ಹಾಯಿಸಬಾರದು, ವಿದ್ಯುತ್ ತಂತಿಗಳ ಹತ್ತಿರವಿರುವ ಮರದ ರಂಬೆಕೊಂಬೆಗಳನ್ನು ಕಡಿಯಬಾರದು ಎಂದು ತಿಳಿಸಿದರು.
ಈಗಾಗಲೇ ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಡಿಸೆಂಬರ್ 22 ರಂದು ವಿದ್ಯುತ್ ಸುರಕ್ಷತೆ ಬಗ್ಗೆ ಭಾಷಣ ಸ್ಪರ್ಧೆ ಏರ್ಪಡಿಸ ಲಾಗುವುದು ಎಂದು ತಿಳಿಸಿದರು. ತಾಲೂಕುವಾರು ಪ್ರತಿ ಸ್ಪರ್ಧೆಗೂ ವಿಭಾಗವಾರು ಮೊದಲನೆಯ ಬಹುಮಾನ 2000 ರೂ, ಎರಡನೇ ಬಹುಮಾನ 1000, ಮೂರನೇಯ ಬಹುಮಾನ 750 ರೂ.ಗಳನ್ನು ನೀಡಲಾಗುವುದು ಎಂದು ತಿಳಿಸಿದರು.ಬೆಸ್ಕಾಂ ಸಿಬ್ಬಂದಿ ಚಂದ್ರಕುಮಾರ್, ಶ್ರೀನಾಥ್, ರಾಮಚಂದ್ರ ,ಇಸಿಓ ಕಾರ್ತಿಕ್ , ಬಿ ಆರ್ ಪಿ ನಾರಾಯಣಪ್ಪ ಮತ್ತು ಮಂಜುಳಾ, ಮುಖ್ಯ ಶಿಕ್ಷಕರಾದ ನಾಗರಾಜ್, ರಾಮಕೃಷ್ಣ ,ಮಂಜುನಾಥ್, ಬಿಐಇಆರ್ ಟಿ ಶಿವಕುಮಾರ್, ಮತ್ತಿತರ ಶಿಕ್ಷಕರು ಹಾಜರಿದ್ದರು