ದೊಡ್ಡಬಳ್ಳಾಪುರ: ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಸ್ಥಳೀಯ ದೊಡ್ಡಬಳ್ಳಾಪುರ ಕ್ಷೇತ್ರದ ವಿದ್ಯುತ್ ಮಗ್ಗ ನೇಕಾರರಿಗೆ ?ಕೈಮಗ್ಗ ಮೀಸಲಾತಿ ಅಧಿನಿಯಮ-1985? ರಡಿ ಕಾಯ್ದೆಯ ಬಗ್ಗೆ ಅರಿವು ಮೂಡಿಸಲಾಯಿತು.
ಕೇಂದ್ರ ಸರ್ಕಾರವು ಕೈಮಗ್ಗ ಮೀಸಲಾತಿ ಅಧಿನಿಯಮ-1985 ಕಾಯ್ದೆಯನ್ನು ಜಾರಿಗೆ ತಂದಿದ್ದು ಈ ಕಾಯ್ದೆಯಡಿ ವಿದ್ಯುತ್ ಮಗ್ಗದಲ್ಲಿ ರೇಷ್ಮೆ ಸೀರೆ, ದೋತಿ, ಟವಲ್ ಮತ್ತು ಗಮ್ಚ, ಲುಂಗಿ, ಬೆಡ್ ಶೀಟ್, ಬೆಡ್ ಕವರ್, ಚಮಕಲಮ್, ಡ್ರೆಸ್ ಮೇಟಿರೀಯಲ್, ಕಂಬಳಿ, ಶಾಲ್, ಉಲ್ಲನ್ ಟ್ವೀಡ್, ಚಾದರ್ ಈ 11 ವಿವಿಧ ಬಗೆಯ ಉತ್ಪನ್ನಗಳನ್ನು ಉತ್ಪಾದಿಸುವಲ್ಲಿ ಮೀಸಲಾತಿ ಇರುವುದರ ಬಗ್ಗೆ ನೇಕಾರರಿಗೆ ಮಾಹಿತಿ ನೀಡಿದರು.
ದೊಡ್ಡಬಳ್ಳಾಪುರ ತಾಲ್ಲೂಕು ದಕ್ಷಿಣ ಭಾಗದಲ್ಲಿ ಭೌಗೋಳಿಕವಾಗಿ ಅತಿ ಹೆಚ್ಚು ನೇಕಾರಿಕೆ ಸಾಂದ್ರತೆ ಇರುವ ಪ್ರದೇಶವಾಗಿದ್ದು ಈ ಭಾಗದಲ್ಲಿ ಹೆಚ್ಚಾಗಿ ವಿದ್ಯುತ್ ಮಗ್ಗವನ್ನು ಅವಲಂಬಿಸಿ ನೇಕಾರರು ಜೀವನವನ್ನು ಸುಧಾರಿಸುತ್ತಿರುತ್ತಾರೆ. ಈ ನಿಟ್ಟಿನಲ್ಲಿ ಸದರಿ ಮಗ್ಗಗಳಲ್ಲಿ ಮೀಸಲಿರಿಸಿರುವ ಉತ್ಪನ್ನಗಳನ್ನು ಹೊರತುಪಡಿಸಿ ಡೂಪೀಯಾನ್, ಎಲ್ ಟಿ ಪಾಲಿಸ್ಟಾರ್ ನಂತಹ ಇತರೆ ಉತ್ಪನ್ನಗಳನ್ನು ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಬಹುದೆಂದು ನೇಕಾರರಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕರು ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಪ್ರಾದೇಶಿಕ ಜಾರಿ ನಿರ್ದೇಶನಾಲಯದ ಅಧಿಕಾರಿ ಮನೋಹರ್, ಜಿಲ್ಲೆಯ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರಾದ ಸೌಮ್ಯ ಎಂ, ಸಹಾಯಕ ನಿರ್ದೇಶಕರಾದ ಸುರೇಶ್ ಕುಮಾರ್ ಎಸ್, ಕೈಮಗ್ಗ ಮತ್ತು ಜವಳಿ ಇಲಾಖೆ ಅಧಿಕಾರಿ ಷನ್ಮುಗಂ, ನೇಕಾರರು ಉಪಸ್ಥಿತರಿದ್ದರು.