ಚಾಮರಾಜನಗರ: ಕೊಳ್ಳೇಗಾಲ ತಾಲೂಕು ತಿಮ್ಮರಾಜಿಪುರದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಹೆಣ್ಣು ಮಕ್ಕಳ ವಸತಿ ಶಾಲೆ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧ, ಆನ್ ಲೈನ್ ಶಾಪಿಂಗ್ನಿಂದಾಗುವ ವಂಚನೆ, ತೊಂದರೆ, ಅನಾಹುತಗಳ ಬಗ್ಗೆ ತಿಳಿವಳಿಕೆ, ಅರಿವು ಕಾರ್ಯಕ್ರಮ ನಡೆಸಲಾಯಿತು.
ಜಿಲ್ಲಾ ಪೊಲೀಸ್ ಸೈಬರ್ ಕ್ರೈಂ ಪೊಲೀಸ್ ಠಾಣೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಹಯೋಗದಲ್ಲಿ ಹಮ್ಮಿ ಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧ, ಆನ್ ಲೈನ್ ಶಾಪಿಂಗ್ ನಿಂದ ಉಂಟಾಗಬಹುದಾದ ತೊಂದರೆಗಳ ಬಗ್ಗೆ ವಿವರವಾಗಿ ಮನವರಿಕೆ ಮಾಡಿಕೊಡಲಾಯಿತು. ಸೈಬರ್ ಕ್ರೈಂ ನ ಅಸಿಸ್ಟೆಂಟ್ ಸಬ್ಇನ್ಸ್ಪೆಕ್ಟರ್ ಮಹದೇವಸ್ವಾಮಿ, ಬಂಗಾರು, ಹೆಡ್ಕಾನ್ಸ್ಟೇಬಲ್ಗಳಾದ ರಮೇಶ್, ಸುರೇಶ್ ಅವರು ಮಾತನಾಡಿ ವಿದ್ಯಾರ್ಥಿಗಳು ಅಪರಿಚಿತರಿಗೆ ಮೊಬೈಲ್ ಓಟಿಪಿ ನೀಡಬಾರದು. ಅಪರಿಚಿತ ಲಿಂಕ್ಗಳನ್ನು ತೆರೆಯಬಾರದು. ವೈಯಕ್ತಿಕ ಹಾಗೂ ಕುಟುಂಬದ ಫೋಟೋಗಳನ್ನು ಮೊಬೈಲ್ ಡಿಪಿಯಲ್ಲಿ ಹಾಕಬಾರದು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು ಎಂದು ತಿಳಿವಳಿಕೆ ನೀಡಿದರು.
ಉದ್ಯೋಗ, ಹಣ ಹೂಡಿಕೆ ವಂಚನೆ, ಲಕ್ಕಿ ಡ್ರಿಪ್ ಲಾಟರಿ, ಆನ್ ಲೈನ್ ಶಾಪಿಂಗ್ ಮಾಡುವುದರಿಂದ ಆಗಬಹುದಾದ ತೊಂದರೆ ಮತ್ತು ಅನಾಹುತಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್, ವಾಟ್ಸಾಪ್, ಟೆಲಿಗ್ರಾಂಗಳಿಂದ ವಿದ್ಯಾರ್ಥಿಗಳು ಆದಷ್ಟು ದೂರ ಇರುವಂತೆ ಸಲಹೆ ಮಾಡಿದರು. ಸೈಬರ್ ಅಪರಾಧ, ವಂಚನೆಗಳ ಬಗ್ಗೆ ಹೆಚ್ಚಿನ ಅರಿವು, ಜ್ಞಾನ ಹೊಂದಿ ತಂದೆ ತಾಯಿ, ಪೋಷಕರು ಹಾಗೂ ಸ್ನೇಹಿತರಿಗೂ ಮಾಹಿತಿ ನೀಡಬೇಕು ಎಂದು ಸೈಬರ್ ಕ್ರೈಂ ಪೊಲೀಸ್ ಠಾಣಾಧಿಕಾರಿಗಳು ತಿಳಿಸಿದರು. ಈ ಸಂದರ್ಭದಲ್ಲಿ ವಸತಿ ಶಾಲೆಯ ಪ್ರಾಂಶುಪಾಲರಾದ ಮಹೇಶ್ ಹಾಗೂ ಸಹಶಿಕ್ಷಕರು ಉಪಸ್ಥಿತರಿದ್ದರು.



