ಅಲ್ಲಮ ಪ್ರಭುಗಳ ವಚನಗಳು ೨೯
ಕೌಪು ಕಾಷಾಯಾಂಬರವ ಕಟ್ಟಿ ಮಂಡೆ ಬೋಳಾದಡೇನಯ್ಯಾ ,
ಎನ್ನಲ್ಲಿ ನಿಜವಿಲ್ಲದನ್ನಕ್ಕ?
ಹೊನ್ನು ಹೆಣ್ಣು ಮಣ್ಣು ತ್ರಿವಿಧವ ತೊರೆದಡೇನಯ್ಯಾ ,
ಮನದಲ್ಲಿ ವ್ರತಿಯಾಗದನ್ನಕ್ಕ?
ಹಸಿವು ತೃಷೆ ವ್ಯಸನಾದಿಗಳ ಬಿಟ್ಟಡೇನಯ್ಯಾ,
ಅರ್ಥದಿಚ್ಛೆ ಮನದಲ್ಲಿ ಹಿಂಗದನ್ನಕ್ಕ?
ಆನು ಜಂಗಮವೆ ?
ಆನು ಹಿರಿಯನಾದೆನಲ್ಲದೆ, ಆನು ಜಂಗಮವೆ ?
ಒಡಲಿಲ್ಲದಾತ ಬಸವಣ್ಣ, ಪ್ರಾಣವಿಲ್ಲದಾತ ಬಸವಣ್ಣ
ಬಸವಣ್ಣನಾಗಿ ಹುಟ್ಟಿಸದೆ,
ಎನ್ನ ಪ್ರಭುವಾಗಿ ಏಕೆ ಹುಟ್ಟಿಸಿದೆ ಗುಹೇಶ್ವರಾ?
ಭಾವಾರ್ಥ
ಸಾಮಾನ್ಯವಾಗಿ ನೀತಿ ಪಾಠ ಮಾಡುವ ಸಂದರ್ಭದಲ್ಲಿ, ಬೇರೆಯವರು ಹೇಗಿರಬೇಕೆಂದು ಬೋಧಿಸುವವರೇ ಹೆಚ್ಚು. ಇದಕ್ಕೆ ವಿರುದ್ಧವಾಗಿ ನಾನು ಹೀಗೆ ಇದ್ದೇನೆ, ಹೀಗಿರಬೇಕು ಎಂದು ಆತ್ಮಾವಲೋಕನ ಮಾಡಿಕೊಳ್ಳುವ ಪರಿ ಪ್ರಭುದೇವರದ್ದು. ವಿರಕ್ತ ವೇಷಧಾರಿಯಾದ ತಾನು, ನಿಜಕ್ಕೂ ವೇಷಕ್ಕೆ ತಕ್ಕಂತೆ ಇದ್ದೇನೆಯೇ? ಎಂದು ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಾರೆ ಅಲ್ಲಮರು. ಅಂತರಾತ್ಮನೊAದಿಗೆ ಸಂವಾದಕ್ಕಿಳಿದು ತಮ್ಮನ್ನು ತಾವೇ ಪರೀಕ್ಷೆಗೊಳಪಡಿಸಿಕೊಳ್ಳುತ್ತಿದ್ದಾರೆ. ಶುಭ್ರವಾಗಿ ಹೊಳೆಯಬೇಕೆಂದರೆ ವಜ್ರದ ಮೇಲಿರುವ ಸಣ್ಣ ಧೂಳನ್ನು ಸಹ ತೊಳೆದು ತೆಗೆಯಬೇಕು. ಹಾಗೆಯೇ ಪ್ರಭುದೇವರು ಗುಹೇಶ್ವರನೊಂದಿಗೆ ಮನ ತೆರೆದು ಸಂವಹಿಸುತ್ತಾ, ಇನ್ನಷ್ಟು ಪ್ರಕಾಶಿಸಲು ಸಜ್ಜಾಗುತ್ತಿದ್ದಾರೆ. ಹೊನ್ನು, ಹೆಣ್ಣು, ಮಣ್ಣು, ಹಸಿವು, ತೃಷೆ, ವಸನಾದಿಗಳ ಬಗ್ಗೆ ಮನದಲ್ಲಿ ವಿರಕ್ತಿ ಮೂಡದಿದ್ದರೆ, ಬಾಹ್ಯದ ವಿರಕ್ತವೇಷ ಢಾಂಬಿಕತೆ ಎನಿಸುತ್ತದೆ ಎನ್ನುವುದು ಪ್ರಭುದೇವರ ಮನೋಗತ.
ಬಸವಣ್ಣರನ್ನು `ಜಂಗಮ ಪ್ರಾಣಿ’ ಎಂದೇ ಗುರುತಿಸಲಾಗುತ್ತದೆ. ಅಂದರೆ ಎಲ್ಲರನ್ನೂ ಪ್ರೀತಿಸುವ, ಗೌರವಿಸುವ, ಸಕಲ ಜೀವಿಗಳಲ್ಲೂ ಒಂದೇ ಚೇತನವನ್ನು ಕಾಣುವ ಕಣ್ಣುಗಳು ಬಸವಣ್ಣರದ್ದು. ಲಿಂಗದ ಉಪಾಸನೆ ಸುಲಭ. ಲಿಂಗ ಏನನ್ನೂ ಬೇಡುವುದಿಲ್ಲ. ಆದರೆ ಜಂಗಮ ಉಪಾಸನೆ ಕಷ್ಟಕರ. ಸಂದರ್ಭಾನುಸಾರ ಜಂಗಮರು ಬೇಡಬಹುದು, ನಿರ್ದೇಶಿಸಬಹುದು. ಈ ಬೇಡಿಕೆ, ನಿರ್ದೇಶನಗಳೆಲ್ಲವೂ ಭಕ್ತನ ಭಕ್ತಿಯ ಪರೀಕ್ಷೆಗಾಗಿಯೇ. ಬಸವಣ್ಣರು ಜಂಗಮ ಲಿಂಗದಲ್ಲಿ ಶ್ರದ್ಧೆವುಳ್ಳವರಾಗಿದ್ದರು. ಎಲ್ಲರಲ್ಲೂ ಶಿವನನ್ನು ಕಾಣುವ ಭಾವ ಅವರದ್ದು. ತನಗೂ, ಇನ್ನೊಬ್ಬರಿಗೂ ಭೇದವೇ ಇಲ್ಲ ಎಂದು ಭಾವಿಸುತ್ತಿದ್ದ ಬಸವಣ್ಣರು ನಿಜಾರ್ಥದಲ್ಲಿ ಜಂಗಮ ಸ್ವರೂಪಿಗಳು. ಅರಿವು, ಆಚಾರ ಒಂದಾದ ಜಂಗಮರು ಬಸವಣ್ಣ ಎಂಬ ಸಂಪೂರ್ಣ ಅರಿವು ಪ್ರಭು ದೇವರಿಗಿತ್ತು. ಹಾಗಾಗಿ `ನಾನು ವೇಷದಲ್ಲಿ ವಿರಕ್ತ, ಬಸವಣ್ಣ ವೇಷದಲ್ಲಿ ಗೃಹಸ್ಥ. ವಯಸ್ಸಿನಲ್ಲಿ ನನಗಿಂತ ಕಿರಿಯ. ಶರೀರಧಾರಿಯಾಗಿದ್ದರೂ ಶರೀರದ ಗುಣಗಳನ್ನು ಹೊಂದಿಲ್ಲ. ಪ್ರಾಣಧಾರಿಯಾಗಿದ್ದರೂ ಪ್ರಾಣ ಗುಣಗಳನ್ನು ಹೊಂದಿಲ್ಲ. ನನ್ನನ್ನು ಬಸವಣ್ಣನಾಗಿ ಹುಟ್ಟಿಸದೆ ಪ್ರಭುವಾಗಿ ಏಕೆ ಹುಟ್ಟಿಸಿದೆ ಗುಹೇಶ್ವರಾ’ ಎಂದು ಅಂತರಾತ್ಮನೊAದಿಗೆ ಸಂವಾದಕ್ಕಿಳಿಯುತ್ತಾರೆ ಪ್ರಭುದೇವರು. ಹೀಗೆ ಹೇಳುವಾಗ ಪ್ರಭುದೇವರಿಗೆ ಬಸವಣ್ಣರ ಬಗ್ಗೆ ಇದ್ದ ಆದರಾಭಿಮಾನಗಳು ಅತ್ಯುತ್ಕöÈಷ್ಟ ಮಟ್ಟದಲ್ಲಿ ಕಾಣುತ್ತವೆ.
ವಾಕ್ಯಾರ್ಥ
ಕೌಪು ಕಾಷಾಯಾಂಬರವ ಕಟ್ಟಿ ಮಂಡೆ ಬೋಳಾದಡೇನಯ್ಯಾ, ಎನ್ನಲ್ಲಿ ನಿಜವಿಲ್ಲದನ್ನಕ್ಕ?
ಕೌಪೀನ, ಕಾವಿ ಬಟ್ಟೆಗಳನ್ನು ತೊಟ್ಟು, ವಿರಕ್ತನಂತೆ ವೇಷಭೂಷಣಗಳನ್ನು ಧರಿಸಿ, ತಲೆ ಬೋಳಾಗಿಸಿಕೊಂಡಿದ್ದರೂ, ನನ್ನೊಳಗೆ ನಿಜ ವೈರಾಗ್ಯ ಮೂಡದಿದ್ದರೆ ಫಲವೇನು? ಅಂತರAಗದೊಳಗಿನ ಸತ್ಯದ ಅರಿವಿಲ್ಲದಿದ್ದರೆ, ಬಹಿರಂಗದ ವಸ್ತç, ಅಲಂಕಾರಗಳು ಅರ್ಥಹೀನವೆನಿಸುತ್ತವೆ ಎನ್ನುತ್ತಾರೆ ಪ್ರಭುದೇವರು.
ಹೊನ್ನು ಹೆಣ್ಣು ಮಣ್ಣು ತ್ರಿವಿಧವ ತೊರೆದಡೇನಯ್ಯಾ,
ಮನದಲ್ಲಿ ವ್ರತಿಯಾಗದನ್ನಕ್ಕ?
ಹೊನ್ನು, ಹೆಣ್ಣು, ಮಣ್ಣು ಇವುಗಳು ಜೀವನನ್ನು ಲೌಕಿಕೊಂದಿಗೆ ಬೆಸೆಯುವ ಸೆಳೆತಗಳು. ಈ ಆಕರ್ಷಣೆಗಳಿಂದ ದೂರ ಸರಿದಿದ್ದೇವೆ ಎಂದು ಬಾಹ್ಯದಲ್ಲಿ ತೋರಿಸಿಕೊಳ್ಳುವ ಅನೇಕರು, ಅಂತರAಗದಲ್ಲಿ ಈ ಬಂಧಗಳೊAದಿಗೆ ಬಂಧಿಯಾಗಿಯೇ ಇರುತ್ತಾರೆ. ಈ ಮೂರು ವಿಷಯಗಳನ್ನು ಸಂಪೂರ್ಣವಾಗಿ ಮನದಿಂದ ಅಳಿಸಿ ಹಾಕಲಾಗದಿದ್ದರೆ ಹೇಗೆ ವ್ರತನಿಷ್ಠ ಎನಿಸಿಕೊಳ್ಳುತ್ತಾನೆ?, ಮನದಿಂದಲೂ ಪೂರ್ಣವಾಗಿ ತ್ರಿವಿಧ ಮೋಹವನ್ನು ಕಳೆದುಕೊಂಡಾಗ ಮಾತ್ರ ಸಾಧಕ ಎನಿಸಿಕೊಳ್ಳಬಲ್ಲ.
ಹಸಿವು ತೃಷೆ ವಸನಾದಿಗಳ ಬಿಟ್ಟಡೇನಯ್ಯಾ,
ಅರ್ಥದಿಚ್ಛೆ ಮನದಲ್ಲಿ ಹಿಂಗದನ್ನಕ್ಕ?
ಅನ್ನ – ಪಾನಗಳನ್ನು ಬಿಟ್ಟು, ಬಟ್ಟೆ – ಬರೆಗಳನ್ನು ತೊರೆದ ಮಾತ್ರಕ್ಕೆ ವಿರಾಗಿ ಎಂದು ತಿಳಿಯಲಾಗುವುದಿಲ್ಲ. ಆಂತರ್ಯದಲ್ಲಿ ಸಂಪತ್ತಿನ ಆಸೆ ಇದ್ದರೆ, ಈ ಎಲ್ಲಾ ಬಾಹ್ಯದ ಆಚರಣೆಗಳು ಕೇವಲ ನೋಡುಗರ ನೋಟವನ್ನು ಸೆಳೆಯಲು ಅಷ್ಟೇ. ಹಸಿವು – ಬಾಯಾರಿಕೆಗಳ ಚಿಂತೆ ನೀಗಿ, ಉಡುಗೆ-ತೊಡುಗೆಗಳ ಬಗ್ಗೆ ಲೇಶವೂ ಗಮನ ಕೊಡದಿರಲು ಸಾಧ್ಯವಾದಾಗ ಮಾತ್ರ ಹೊರಗಿನ ಆಚರಣೆಗಳು ಸಾರ್ಥಕತೆ ಪಡೆಯುತ್ತವೆ.
ಆನು ಜಂಗಮವೆ? ಆನು ಹಿರಿಯನಾದೆನಲ್ಲದೆ ಆನು ಜಂಗಮವೆ?
ಜಕಾರಾಜ್ಜನನಂ ದೂರಂ ಗಕಾರಾತ್ ಗತಿನಾಶನಮ್
ಮಕಾರಾನ್ಮರಣಂ ನಷ್ಟಂ ಜಂಗಮಸ್ತç÷್ಯಕ್ಷರಾತ್ಮಕಃ? ಎಂದು ವೀರಾಗಮದಲ್ಲಿ ಹೇಳಿರುವಂತೆ,
ಜನನ, ಗಮನ, ಮರಣಗಳಿಗೆ ಮೀರಿದ ಚೇತನ ಶಕ್ತಿ ಜಂಗಮ. ಪ್ರತಿಕ್ಷಣವೂ ನೂತನತೆಯನ್ನು ಪಡೆಯುವ ಚಲನಶೀಲತೆ ಯನ್ನು ಹೊಂದಿರುವುದು ಜಂಗಮ. ತ್ರಿಗುಣರಹಿತನಾದಾಗ ಮಾತ್ರ ಜಂಗಮ ಚೈತನ್ಯ ಪ್ರಕಾಶಿಸಲು ಸಾಧ್ಯ. ಸ್ಥಾವರಕ್ಕೆ ಚೈತನ್ಯ ದೊರೆಯುವುದು ಸಹ ಜಂಗಮ ಸ್ಪರ್ಶದಿಂದಲೇ. ವ್ಯಕ್ತಿ ಮಾಡುವ ಕಾಯಕದಿಂದ ಆತನಿಗೂ, ಸಮಾಜಕ್ಕೂ ಒಳಿತಾದರೆ, ಆ ಭಾವವೂ ಜಂಗಮ ಸ್ಥಿತಿಯೇ. ಸಾರ್ವತ್ರಿಕ ಅಭ್ಯುದಯಕ್ಕೆ ದುಡಿಯುವ ವ್ಯಕ್ತಿಗೆ ಸ್ವಲ್ಪ ಹಿನ್ನಡೆಯಾದರೂ ವ್ಯವಸ್ಥೆ ಎಲ್ಲವೂ ಸ್ಥಾವರವಾಗಿ ಬಿಡಬಹುದು. ಅದನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದೇ ಜಂಗಮದ ಕೆಲಸ. ಜಂಗಮ ಎನ್ನುವುದು ವ್ಯಕ್ತಿಯ ಮನಸ್ಥಿತಿಯೂ ಹೌದು. ನಿರಂತರ ಕ್ರಿಯಾಶೀಲ ಮನಸ್ಸು ಮತ್ತು ವ್ಯಕ್ತಿ ಜಂಗಮ. ಜಪ-ತಪ, ಪೂಜೆ, ಶಿವ ಸಾಕ್ಷಾತ್ಕಾರ ಇವು ಜಂಗಮನ ಮುಖ್ಯ ಲಕ್ಷಣಗಳು. ಜಂಗಮನಾದವನು ಷಟ್ ಸ್ಥಲ ಜ್ಞಾನಿಯಾಗಿರಬೇಕೆಂದು ಆಗಮಗಳಲ್ಲಿ ಹೇಳಲಾ ಗಿದೆ. ಈ ಷಟ್ ಸ್ಥಲ ಜ್ಞಾನದಿಂದ ಮನದಲ್ಲಿ ಬೆಳಗುವ ಅರಿವೇ ಜಂಗಮ. ಈ ಎಲ್ಲಾ ನೆಲೆಗಳಲ್ಲಿ `ನಾನು ಜಂಗಮನೆ’ ಅಥವಾ ಕೇವಲ ಹಿರಿಯ ಮಾತ್ರನೇ? ಎಂದು ತನ್ನನ್ನು ತಾನೇ ಅವಲೋಕನಕ್ಕೊಳಪಡಿಸಿ ಕೊಳ್ಳುತ್ತಿದ್ದಾರೆ ಪ್ರಭುದೇವರು.
ಒಡಲಿಲ್ಲದಾತ ಬಸವಣ್ಣ, ಪ್ರಾಣವಿಲ್ಲದಾತ ಬಸವಣ್ಣ,
ಬಸವಣ್ಣನಾಗಿ ಹುಟ್ಟಿಸದೇ ಎನ್ನ ಪ್ರಭುವಾಗಿ ಏಕೆ ಹುಟ್ಟಿಸಿದೆ? ಗುಹೇಶ್ವರಾ!
ಭೌತಿಕವಾಗಿ ಶರೀರವನ್ನು ಹೊಂದಿದ್ದರೂ, ಶರೀರದ ಗುಣಗಳನ್ನು ಮೀರಿ, ಶರೀರದ ಹಂಗನ್ನೆಲ್ಲ ತೊರೆದು ನಡೆಯುತ್ತಿರುವವರು ಬಸವಣ್ಣ. ಪ್ರಾಣವಿದ್ದೂ ಪ್ರಾಣದ ಗುಣಗಳಿಗೆ ಹೊರತಾದ ಜೀವ ಬಸವಣ್ಣ. ದೇಹ, ಪ್ರಾಣಗಳ ಕ್ಲೀಷೆಗಳೊಳಗೆ ಸಿಲುಕದೆ, ಸಂಸಾರಿಯಾಗಿದ್ದೂ ಸಂಸಾರದ ಜಟಿಲ ಜಂಜಾಟಗಳಲ್ಲಿ ಮುಳುಗದೆ, ಎಲ್ಲವನ್ನೂ `ಇದಂ ನ ಮಮ’ ಎನ್ನುವ ನಿರ್ವಿಕಾರ ಭಾವದಿಂದ ನೋಡುವ ನಿಜಶರಣ, ನಿಜಾರ್ಥದ ಜಂಗಮ ಬಸವಣ್ಣ. ಕಲ್ಯಾಣ ರಾಜ್ಯದ ಚಿಂತನೆಯಲ್ಲಿ ತೊಡಗಿ, ಆತ್ಮಕಲ್ಯಾಣದೊಂದಿಗೆ, ಲೋಕಕಲ್ಯಾಣಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿ ಇಟ್ಟ ಬಸವಣ್ಣರದ್ದು ಸಾರ್ಥಕ ಜನ್ಮ ಎಂದರಿತ ಪ್ರಭುದೇವರು, ಬಸವಣ್ಣನೇ ತನ್ನೊಳಗೆ ಆವಿರ್ಭವಿಸಿದರೆ ತನ್ನ ಜನ್ಮವೂ ಹೆಚ್ಚಿನ ಸಾರ್ಥಕತೆ ಪಡೆಯುತ್ತಿತ್ತು ಎಂದು ಅರುಹುತ್ತಾರೆ.
ಪ್ರಭುದೇವರದ್ದು ಆತ್ಮಕಲ್ಯಾಣದ ಅಂತರ್ಮುಖಿ ಪಯಣವಾದರೆ, ಬಸವಣ್ಣರದ್ದು ಲೋಕಕಲ್ಯಾಣಕ್ಕಾಗಿ ಬಾಹ್ಯ ಪಯಣ. ಪ್ರಭುದೇವರು ಬಾಹ್ಯೆದೆಡೆಗೆ ವೈರಾಗ್ಯ ಭಾವ ತಳೆದು, ಅಂತರAಗದೆಡೆಗೆ ನಡೆದು, ಗುಹೇಶ್ವರನನ್ನು ದರ್ಶಿಸಿದರೆ, ಬಸವಣ್ಣರು ಅಂತರAಗದ ದರ್ಶನ ಪಡೆದು, ಬಾಹ್ಯೆದೆಡೆಗೆ ನಡೆದು, ಎಲ್ಲರಲ್ಲೂ ಜಂಗಮ ಶಿವನನ್ನು ಕಂಡವರು. ಅನುಭಾವದ ಮೂಲಕ ಆಂತರ್ಯದಲ್ಲಿ ಕಂಡ ಕಾಣ್ಕೆಯನ್ನೇ, ಹೊರಗಿನ ಮೂರ್ತರೂಪದ ಜಂಗಮನಲ್ಲಿಯೂ ಕಾಣುತ್ತಾರೆ ಬಸವಣ್ಣ. ತಾನು ಪಡೆದ ದರ್ಶನವೇ ಅತ್ಯಂತ ಉತ್ಕöÈಷ್ಟ ಎಂದು ಭಾವಿಸುವ ಅನೇಕರ ನಡುವೆ, ತನಗಾದ ದರ್ಶನಕ್ಕಿಂತಲೂ ಬಸವಣ್ಣರ ಕಾಣ್ಕೆ ಅದ್ಭುತವಾದದ್ದು ಎಂದು ಭಿನ್ನವಿಸುವ ಪ್ರಭುದೇವರದ್ದು ಅತ್ಯಂತ ಎತ್ತರದ ನಿಲುವು.
ಶ್ರೀಸಿದ್ದೇಶ್ವರ ಸ್ವಾಮಿಗಳ ಚರಣಗಳಿಗೆ ಶ್ರದ್ಧಾಪೂರ್ವಕ ಅರ್ಪಣೆ.
******************************



