ಬೆಂಗಳೂರು: ಜನವರಿ 22ರಂದು ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಜ.22ರಂದು ಯಾವುದೇ ಪೊಲೀಸ್ ಸಿಬ್ಬಂದಿಗೆ ರಜೆ ನೀಡದಂತೆ ಸೂಚಿಸಲಾಗಿದೆ. ಒಂದು ವೇಳೆ ರಜೆಯಲ್ಲಿರುವವರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಲೇಬೇಕು ಎಂದು ಹಿರಿಯ ಅಧಿಕಾರಿಗಳು ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ.
ಈ ಹಿಂದಿನ ಕೋಮುಗಲಭೆಗಳ ಬಗ್ಗೆ ಮಾಹಿತಿ ಪಡೆದಿರುವ ಪೊಲೀಸರು, ಅಂತಹ ಗಲಭೆಗಳಲ್ಲಿ ಭಾಗಿಯಾಗಿದ್ದವರ ಮೇಲೂ ಹದ್ದಿನ ಕಣ್ಣು ಇಡಲಾಗಿದೆ. ಜೊತೆಗೆ ಆಯಾ ರೌಡಿಶೀಟರ್ಗಳ ಮೇಲೂ ನಿಗಾ ವಹಿಸಲಾಗಿದೆ.ಅಲ್ಲದೇ ಎಲ್ಲಾ ಠಾಣೆಗಳ ವ್ಯಾಪ್ತಿಯಲ್ಲಿ ಇನ್ಸ್ಪೆಕ್ಟರ್ಗಳು ಧರ್ಮದ ಮುಖಂಡರನ್ನ ಕರೆಸಿ ಶಾಂತಿಪಾಲನಾ ಸಭೆ ನಡೆಸಬೇಕು. ಈ ಬಗ್ಗೆ ತಮ್ಮ ಸಮುದಾಯದ ಮುಖಂಡರಿಗೆ ಸಲಹೆ ನೀಡುವಂತೆ ಸೂಚಿಸಲು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.
ಜ.22ರಂದು ರಾಜ್ಯದಲ್ಲಿಯೂ ಯಾವುದೇ ರ್ಯಾಲಿಗಳಿಗೆ ಅವಕಾಶ ಇಲ್ಲ. ಆ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ವಿವಿಧ ಜಿಲ್ಲೆಗಳಿಂದಲೂ ಪೊಲೀಸರನ್ನು ಕರೆಸಲಾಗಿದೆ. ಮಂಡ್ಯ ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಂದಲೂ ಹೆಚ್ಚವರಿ ಪೊಲೀಸರ ನಿಯೋಜನೆ ಮಾಡಿರುವುದಾಗಿ ಅಧಿಕಾರಿಗಳು ತಿಳಿಳಿಸಿದ್ದಾರೆ.