This is the title of the web page
This is the title of the web page

ಬಿ.ಮುನೇಗೌಡರನ್ನು ಬೆ.ಗ್ರಾಂ. ಜಿಲ್ಲಾಧ್ಯಕ್ಷ ಸ್ಥಾನದಿಂದ ವಜಾಕ್ಕೆ ಒತ್ತಾಯ

ದೊಡ್ಡಬಳ್ಳಾಪುರ: ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿಯೊಂದಿಗಿನ ಜೆಡಿಎಸ್ ಮೈತ್ರಿ ಕುರಿತಂತೆ ಪಕ್ಷದ ವರಿಷ್ಠರ ನೈಜತೆಯ ಬಗ್ಗೆ ಕೇವಲ ಹಾಗೂ ಅವಹೇಳನಾಕಾರಿಯಾಗಿ ಮಾತನಾಡಿರುವ ಬಿ.ಮುನೇಗೌಡ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಒತ್ತಾಯಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಪಕ್ಷದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಉಳಿವಿಗಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು,ಅನಾರೋಗ್ಯದ ನಡುವೆಯೂ ರಾಜ್ಯಾದ್ಯಂತ ಪಕ್ಷದ ಸಂಘಟನೆಗಾಗಿ 6 ತಿಂಗಳುಗಳ ಕಾಲ ನಿರಂತರ ಪಂಚರತ್ನ ಯಾತ್ರೆಯನ್ನ ಮಾಡಿದರು, ಆದರೆ ಕಾಂಗ್ರೆಸ್ ಪಕ್ಷದ ಬಿಟ್ಟಿ ಭಾಗ್ಯಗಳಿಗೆ ಜನ ಮರಳಾದರೂ, ಆದರೂ ಸಹ ರಾಜ್ಯದ ಪ್ರಾದೇಶಿಕ ಹಿತಾಸಕ್ತಿಯನ್ನು ಕಾಪಾಡಲು ಈಗಲೂ ಸಹ ದುಡಿಯುತ್ತಿದ್ದಾರೆ. ಇದೇ ಕಾರಣದಿಂದಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಪ್ರಧಾನಿಗಳು ಆದ ಹೆಚ್.ಡಿ.ದೇವೇಗೌಡ ಅವರು ಅನೇಕ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದಾರೆ.

2018 ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವ ವೇಳೆ ಹಾಜರಿದ್ದ ರಾಷ್ಟ್ರ ಮಟ್ಟದ ಕಾಂಗ್ರೆಸ್ ಮುಖಂಡರು ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವಾಗ ಮಾತನಾಡದೆ ಮೌನವಹಿಸಿ ಅವಮಾನಿಸಿದರು ಇದರಿಂದ ಹೆಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಸ್ಥಾನ ಕಳೆದುಕೊಂಡರು.

ಪ್ರಸ್ತುತ ಪ್ರಾದೇಶಿಕ ಪಕ್ಷದ ಅಸ್ತಿತ್ವ ಮತ್ತು ರಾಜ್ಯದ ಹಿತ ಕಾಪಾಡುವ ನಿಟ್ಟಿನಲ್ಲಿ, ಬಿಜೆಪಿಯೊಂದಿಗೆ ಹೊಂದಾಣಿಕೆ ಮಾತುಕತೆ ನಡೆದಿದೆ. ಆದರೆ ಈ ನಿಲುವನ್ನು ಬಿ.ಮುನೇಗೌಡ ಅವರು ಕಳೆದ ಹಲವು ವರ್ಷಗಳಿಂದ ಪಕ್ಷದಿಂದ ಅವಕಾಶ ಪಡೆದು ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡಿದ ಸ್ವಯಂ ಕೃತ ಅಪರಾಧದ ಮೂಲಕ ಸೋತರು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿರುವ ಬಿ.ಮುನೇಗೌಡ ಅವರು, ಪಕ್ಷ ಹಾಗೂ ವರಿಷ್ಠರ ವಿರುದ್ಧ ಮತ್ತೆ ಬೇಕಾಬಿಟ್ಟಿಯಾಗಿ ಮಾತನಾಡಿದ್ದಾರೆ.

ಬಿ.ಮುನೇಗೌಡರ ಈ ವರ್ತನೆಯಿಂದ ತಾಲೂಕಿನಲ್ಲಿ ಪದೇ ಪದೆ ಪಕ್ಷಕ್ಕೆ ಹಿನ್ನಡೆಯಾಗುತ್ತಿದೆ. 2013ರಲ್ಲಿ ಪಕ್ಷದ ಟಿಕೆಟ್ ದೊರಕದ ವೇಳೆ ಇದೇ ರೀತಿ ಪಕ್ಷ ಹಾಗೂ ವರಿಷ್ಠರ ವಿರುದ್ಧ ಹೀನಾಮಾನವಾಗಿ ಅವಮಾನ ಮಾಡಿದ್ದು, ಈಗ ಮತ್ತೆ ಅದೇ ರಾಗ ಆರಂಭಿಸಿದ್ದಾರೆ. ಪಕ್ಷದ ಮುಖಂಡರು ಆರಂಭಿಕ ಹಂತದಲ್ಲಿಯೇ ಇತ್ತ ಗಮನಹರಿಸಿ ಈ ಕೂಡಲೇ ಪಕ್ಷದಿಂದ ಬಿ.ಮುನೇಗೌಡ ಅವರನ್ನು ಉಚ್ಚಾಟನೆ ಮಾಡಬೇಕೆಂದು ಒತ್ತಾಯಿಸಿದರು.

ಈ ಸಮಯದಲ್ಲಿ ಹಾಜರಿದ್ದ ಹಿರಿಯ ಮುಖಂಡರು ಮಾತನಾಡಿ ಬಿಜೆಪಿ – ಜೆಡಿಎಸ್ ನಡುವಿನ ಮೈತ್ರಿ ಕುರಿತಾದ ಪಕ್ಷದ ವರಿಷ್ಠರ ನಿಲುವಿಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಬೆಂಬಲಿಸುತ್ತೇವೆ. ಬಿ.ಮುನೇಗೌಡ ಅವರಿಗೆ ಪಕ್ಷದ ಎಲ್ಲಾ ಅಧಿಕಾರ ನೀಡಿದರು ಪದೇ ಪದೇ ಪಕ್ಷ ಹಾಗೂ ಪಕ್ಷದ ವರಿಷ್ಠರ ವಿರುದ್ಧ ಹೇಳಿಕೆ ನೀಡುತ್ತಿರುವುದು ಉತ್ತಮ ನಡುವಳಿಕೆಯಲ್ಲ.

ಕಳೆದ 10-12ವರ್ಷಗಳಿಂದ ಪಕ್ಷದ ಜಿಲ್ಲಾ ಅಧ್ಯಕ್ಷರಾಗಿದ್ದರು, ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಆಗಿದ್ದವರು ಪತ್ರಿಕಾ ಹೇಳಿಕೆಯೊಂದರಲ್ಲಿ ವರಿಷ್ಠರ ನಿಲುವನ್ನು ಅಗೌರವವಾಗಿ ಮಾತನಾಡಿರುವುದು ವಿಪರ್ಯಾಸ. ಅಲ್ಲದೆ ಜೆಡಿಎಸ್ ಪಕ್ಷ ಸಾಯುತ್ತದೆ ಎಂಬುವ ಮೂಲಕ ಬಿ.ಮುನೇಗೌಡ ಅವರಿಗೆ ರಾಜಕೀಯ ಭವಿಷ್ಯ ಇಲ್ಲ ಎಂಬುದು ಬಯಲಾಗಿದೆ.

ಕಳೆದ ಚುನಾವಣೆಯಲ್ಲಿ ಬಿ.ಮುನೇಗೌಡ ಅವರಿಗೆ ಬಂದ ಮತಗಳು, ಪಕ್ಷಕ್ಕೆ ದೊರೆತ ಮತಗಳಾಗಿವೆಯೇ ಹೊರತು ಬಿ.ಮುನೇಗೌಡರ ವೈಯಕ್ತಿಕ ವರ್ಚಸ್ಸಿನ ಮತಗಳಲ್ಲ. ಬೇಕಾಬಿಟ್ಟಿ ಹೇಳಿಕೆ ನೀಡಿ ಪಕ್ಷಕ್ಕೆ ಅಗೌರವ ತೋರುವ ಬದಲು ಬಿ.ಮುನೇಗೌಡ ಅವರು ದೊಡ್ಡಬಳ್ಳಾಪುರವನ್ನು ಮರೆತು ಇತರೆ ಕೆಲಸಗಳತ್ತ ಗಮನ ಹರಿಸುವುದು ಒಳಿತು ಎಂದರು.

ಸಾರಥಿ ಸತ್ಯಪ್ರಕಾಶ್ ಮಾತನಾಡಿ ಪಕ್ಷದ ವರಿಷ್ಠರ ನಿಲುವಿಗೆ ಎಲ್ಲರೂ ಬದ್ಧರಾಗಿರಬೇಕು. ಬೇರೆಯವರ ಕುರಿತು ಟೀಕೆ ಮಾಡುವುದಿಲ್ಲ ಅದು ಅವರ ವೈಯಕ್ತಿಕ ಅಭಿಪ್ರಾಯ, ಆದರೆ ಪಕ್ಷದ ಸಂಘಟನೆಯಲ್ಲಿ ಎಲ್ಲರೂ ಒಟ್ಟಾಗಿ ಸಾಗಬೇಕು ಈ ಮೂಲಕ ಪಕ್ಷದ ಸಂಘಟನೆಯ ಉದ್ದೇಶಗಳನ್ನು ಸಾಧಿಸಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯರಾದ ಹೆಚ್.ಅಪ್ಪಯ್ಯಣ್ಣ, ಎ. ನರಸಿಂಹಯ್ಯ, ಮುಖಂಡರಾದ ರಾ.ಬೈರೇಗೌಡ, ನಗರಸಭಾ ಸದಸ್ಯ ತ.ನ.ಪ್ರಭುದೇವ್ ತಳವಾರ ನಾಗರಾಜ್ ಮುಂತಾದವರು ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಅಶ್ವಥ್ ನಾರಾಯಣ್, ಕುಂಟನಹಳ್ಳಿ ಮಂಜುನಾಥ್, ಪ್ರಭಾಕರ್ ಆನಂದ್, ಪ್ರವೀಣ್ ಗೌಡ, ಅಶ್ವಥ್ ಸೇರಿದಂತೆ ಪಕ್ಷದ ಹಲವಾರು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.