ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಆಪ್ತ ಹಾಗೂ ಎನ್ ಸಿಪಿ ಮುಖಂಡ ಬಾಬಾ ಸಿದ್ದಿಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದಲ್ಲಿ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.
ಬಾಬಾ ಸಿದ್ದಿಕ್ ಹತ್ಯೆ ಪ್ರಕರಣದ ಮೂವರು ಶೂಟರ್ಗಳಲ್ಲಿ ಒಬ್ಬನಾದ ಶಿವಕುಮಾರ್ ಎಂಬಾತನನ್ನು ಇಂದು ಉತ್ತರ ಪ್ರದೇಶದ ಬಹ್ರೈಚ್ನಲ್ಲಿ ಬಂಧಿಸಲಾಗಿದೆ.
ನೇಪಾಳಕ್ಕೆ ಪಲಾಯನ ಮಾಡಲು ಯತ್ನಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ಈ ಪ್ರಕರಣದಲ್ಲಿ 20 ಮಂದಿಯನ್ನು ಬಂಧಿಸಲಾಗಿತ್ತು.
ಶಿವಕುಮಾರ್ಗೆ ಆಶ್ರಯ ನೀಡಿ ನೇಪಾಳಕ್ಕೆ ಪರಾರಿಯಾಗಲು ಸಹಾಯ ಮಾಡಿದ್ದಕ್ಕಾಗಿ ಇತರ ನಾಲ್ವರು ಆರೋಪಿಗಳನ್ನೂ ಕೂಡ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಅನುರಾಗ್ ಕಶ್ಯಪ್, ಜ್ಞಾನ್ ಪ್ರಕಾಶ್ ತ್ರಿಪಾಠಿ, ಆಕಾಶ್ ಶ್ರೀವಾಸ್ತವ ಮತ್ತು ಅಖಿಲೇಶೇಂದ್ರ ಪ್ರತಾಪ್ ಸಿಂಗ್ ಎಂದು ಗುರುತಿಸಲಾಗಿದೆ.
ಕಳೆದ ತಿಂಗಳು ಎನ್ಸಿಪಿ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ ರ ಹತ್ಯೆಯ ನಂತರ ಆರೋಪಿಗಳು ಪರಾರಿಯಾಗಿದ್ದರು. ಇದೀಗ ಈ ಪ್ರಕರಣದ ಪ್ರಮುಖ ಆರೋಪಿ ಉತ್ತರ ಪ್ರದೇಶ ಮತ್ತು ಮುಂಬೈ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾನೆ.
ಲಾರೆನ್ಸ್ ವಿಷ್ಣೋಯ್ ಗ್ಯಾಂಗ್ನೊಂದಿಗೆ ತನಗೆ ನಂಟು ಇದೆ ಎಂದು ಶಿವಕುಮಾರ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸದ್ಯ ವಿದೇಶದಲ್ಲಿರುವ ಅನ್ಮೋಲ್ ಬಿಷ್ಣೋಯ್ ಅವರ ಸೂಚನೆ ಮೇರೆಗೆ ಈ ಕೊಲೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.