ಗುವಾಹಟಿ: ಕಾಮನ್ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ಲಕ್ಷ್ಯ ಸೇನ್ ಮತ್ತು ಅಗ್ರ ಶ್ರೇಯಾಂಕದ ಆಕರ್ಷಿ ಕಶ್ಯಪ್ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಕ್ವಾರ್ಟರ್ ಫೈನಲ್ನಲ್ಲಿ ಶುಕ್ರವಾರ ಸೋತಿದ್ದಾರೆ.
ಪ್ರಿಕ್ವಾರ್ಟರ್ ಫೈನಲ್ನಲ್ಲಿ ಸೇನ್ ಅವರು ಅಭಿಷೇಕ್ ಸೈನಿ ವಿರುದ್ಧ 21-23, 21-12, 24-22 ಅಂತರದಲ್ಲಿ ಜಯಗಳಿಸಿದರು. ಆದರೆ, ಕ್ವಾರ್ಟರ್ನಲ್ಲಿ ಭರತ್ ರಾಘವ್ ವಿರುದ್ಧ 21-15, 10-21, 21-17 ಅಂತರದಲ್ಲಿ ಸೋತರು.
ಪ್ರಿಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವರುಣ್ ಕಪೂರ್ ಅವರನ್ನು ಸೋಲಿಸಿದ ರಾಘವ್ ಸೆಮಿಫೈನಲ್ನಲ್ಲಿ ನಾಲ್ಕನೇ ಶ್ರೇಯಾಂಕದ ತರುಣ್ ವಿರುದ್ಧ ಸೆಣಸಲಿದ್ದಾರೆ. ಮತ್ತೊಂದು ಸೆಮಿಫೈನಲ್ನಲ್ಲಿ ಚಿರಾಗ್ ಸೇನ್ ಎರಡನೇ ಶ್ರೇಯಾಂಕದ ಕಿರಣ್ ಜಾರ್ಜ್ ವಿರುದ್ಧ ಹೋರಾಡಲಿದ್ದಾರೆ.
ಚಿರಾಗ್ ಅವರು ಆರ್ಯ ಅವರನ್ನು ಸೋಲಿಸಿದರೆ, ಜಾರ್ಜ್ ಅವರು ಎಂ. ಮಿಥುನ್ ಅವರನ್ನು ಮಣಿಸಿದರು. ಮಹಿಳೆಯರ ಸಿಂಗಲ್ಸ್ನಲ್ಲಿ ಕಶ್ಯಪ್ 21-15, 22-20 ರಲ್ಲಿ ತನ್ವಿ ಶರ್ಮಾ ವಿರುದ್ಧ ಸೋತರು. ತನ್ವಿ ಅವರು ಇಶಾರಾಣಿ ಬರುವಾ ಅವರನ್ನು ಎದುರಿಸಲಿದ್ದಾರೆ.