ರಾಮನಗರ: ಒಕ್ಕಲಿಗರೆಲ್ಲರು ಜೆಡಿಎಸ್ ಪಕ್ಷ ನಂಬಿದ್ದರು. ಅಂತಹ ಪಕ್ಷವನ್ನು ತೆಗೆದುಕೊಂಡು ಹೋಗಿ ಮೋದಿ ಪಾದದ ಅಡಿ ಇಟ್ಟಿದ್ದೀರಿ.
ಈಗ ಒಕ್ಕಲಿಗರ ಸ್ಥಿತಿ ಏನಾಗಬೇಕು. ಮೈತ್ರಿ ಪಕ್ಷದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಕುಮಾರಸ್ವಾಮಿ ಅವರನ್ನು ಘೋಷಣೆ ಮಾಡಲು ಸಾಧ್ಯವೇ ಎಂದು ಮಾಗಡಿ ಕ್ಷೇತ್ರ ಶಾಸಕ ಬಾಲಕೃಷ್ಣ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕಲಿಗರ ಪಾರುಪತ್ಯ ಇದ್ದ ಜನತಾದಳದ ಕಥೆ ಮುಗಿಸಿದ್ದಾರೆ. ಮುಂದೆ ಕುಮಾರಸ್ವಾಮಿ ಅವರ ಸ್ಥಿತಿ ಏನು. ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಣೆ ಮಾಡಿಸಲಿ ನಾವೂ ಕೂಡ ಸಫೋರ್ಟ್ ಮಾಡುತ್ತೇವೆ ಎಂದರು.
ಈಗ ಎರಡು ಸೀಟು ಪಡೆಯೋಕೆ ತಿಣುಕಾಡುತ್ತಿದ್ದಾರೆ. ಅವರು ಯಾವ ಪಕ್ಷದ ಜೊತೆ ಹೋದರೂ ಅಸಮಾಧಾನ ಹೊರಹಾಕುತ್ತಾರೆ.
ಇನ್ನೂ ಒಂದು ತಿಂಗಳ ಬಳಿಕ ಮೋದಿ, ಅಮಿತ್ ಷಾ ಅವರನ್ನು ಹೇಗೆ ಬಯ್ಯುತ್ತಾರೆ ನೋಡಿ. ಅವರು ಎಲ್ಲಿ ಹೋದರು ಕೂಡ ಎಲ್ಲರನ್ನೂ ಬೈದುಕೊಂಡೆ ಹೊರಗೆ ಬರುತ್ತಾರೆ ಎಂದು ಕಿಡಿಕಾರಿದರು.
ಕುಮಾರಸ್ವಾಮಿ ಗಿಮಿಕ್ ರಾಜಕಾರಣಿ. ವಿರೋಧಿಗಳ ಮೇಲೆ ಅಪಪ್ರಚಾರ ಮಾಡಿ ಅನುಕಂಪ ಗಿಟ್ಟಿಸಿಕೊಳ್ಳಲು ಮಾತನಾಡುತ್ತಾರೆ. ಚುನಾವಣೆ ಅಂದ ಮೇಲೆ ಎಲ್ಲವೂ ಇರುತ್ತದೆ. ಚಾಣಕ್ಯನ ತಂತ್ರ ಕುಮಾರಸ್ವಾಮಿಗೆ ಹೆಚ್ಚು ಗೊತ್ತು. ಅದನ್ನು ಇಲ್ಲಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಅನುಕಂಪದ ಅಲೆ ಗಿಟ್ಟಿಸಿಕೊಳ್ಳಲು ಮುಂದಾಗಿದ್ದು, ಅದೆಲ್ಲ ನಡೆಯುವುದಿಲ್ಲ ಎಂದು ಬಾಲಕೃಷ್ಣ ತಿರುಗೇಟು ನೀಡಿದರು.