ಮಾಗಡಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಒಂದು ಪಕ್ಷ ಅಧಿಕಾರಕ್ಕೆ ಬಂದರೆ ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಮಾನ್ಯ ಜನರ ಸಮಸಮಾಜ ನಿರ್ಮಾಣವಾಗಲು ಎರಡು ವರ್ಷಗಳ ಕಾಲ ಕಾಲಾವಕಾಶವನ್ನು ವಿರೋಧ ಪಕ್ಷ ಹಾಗೂ ಸಂಘ ಸಂಸ್ಥೆಗಳು ನೀಡಬೇಕು ಎಂದು ಶಾಸಕರಾದ ಹೆಚ್.ಸಿ.ಬಾಲಕೃಷ್ಣ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕಿನ ಮಾಡಬಾಳ್ ಗ್ರಾಪಂ ವ್ಯಾಪ್ತಿಯ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ನನ್ನನ್ನು ಈ ಕ್ಷೇತ್ರದ ಜನತೆ ಐದನೇ ಭಾರಿಗೆ ಶಾಸಕನನ್ನಾಗಿ ಮಾಡಿದ್ದಾರೆ.ನಾನು ಗೆದ್ದಾಗಿನಿಂದ ಒಂದು ದಿನವೂ ಮನೆಯಲ್ಲಿ ಕೂರದೇ ತಾಲ್ಲೂಕಿನಲ್ಲಿ ಏನೆಲ್ಲಾ ಸಮಸ್ಯೆಗಳಿಗೆ ಅವುಗಳನ್ನು ಆಲಿಸಿ ಪಟ್ಟಿಯನ್ನು ತಯಾರಿಸಿಕೊಳ್ಳಲಾಗುತ್ತಿದೆ.
ತದನಂತರ ಯಾವ ಭಾಗದಲ್ಲಿ ಏನೇನು ಆಗಬೇಕೆಂದು ನನಗೆ ತಿಳಿದಿದೆ ಅದನ್ನು ಆಡಳಿತ ಪಕ್ಷದ ಶಾಸಕನಾಗಿರುವ ಕಾರಣವಾಗಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ನನ್ನ ಪ್ರಾಮಾಣಿಕ ಪ್ರಯತ್ನ ಮುಂದುವರೆಯಲಿದೆ.ಒಂದು ಕ್ಷೇತ್ರ ಅಭಿವೃದ್ಧಿ ಆಗಬೇಕೆಂದರೆ ಆಡಳಿತ ಯಂತ್ರ ತಹಬದಿಗೆ ಬರಬೇಕು.ಆಗಮಾತ್ರ ಸಾಮಾನ್ಯ ಜನರಿಗೆ ಸಮಸಮಾಜ ನೀಡಲು ಸಾಧ್ಯವಾಗುತ್ತದೆ.ಇವೆಲ್ಲವೂ ಆಗಬೇಕೆಂದರೆ ಎರಡು ವರ್ಷಗಳ ಕಾಲಾವಕಾಶ ಬೇಕಾಗುತ್ತದೆ.ಇದನ್ನು ವಿರೋಧ ಪಕ್ಷದವರು ಮತ್ತು ವಿವಿಧ ಸಂಘ ಸಂಸ್ಥೆಗಳು ಅರ್ಥೈಸಿಕೊಳ್ಳಬೇಕು ಎಂದರು.
ಹೋರಾಟ ಮಾಡಲು ಹಕ್ಕಿದೆ:ಪ್ರಸ್ತುತ ಸಮಾಜದಲ್ಲಿ ಜ್ವಲಂತ ಸಮಸ್ಯೆಗಳ ಕುರಿತು ಹೋರಾಟ ಮಾಡಲು ಪ್ರತಿಯೊಬ್ಬರಿಗೂ ಹಕ್ಕಿದೆ.ರೈತ ಸಂಘಟನೆಯವರು ಹೈ ಟೆನ್ಸನ್ ಲೈನ್ ಕುರಿತು ಪರಿಹಾರಕ್ಕೆ ಒತ್ತಾಯಿಸಿ ಹೋರಾಟ ಮಾಡುತ್ತಿದ್ದಾರೆ.ನಲವತ್ತು ವರ್ಷಗಳ ಹಿಂದೆ ಈ ಕಾಮಗಾರಿ ನಡೆದಿದ್ದು ಇಲ್ಲಿಯವರೆಗೂ ಏನು ಮಾಡುತ್ತಿದ್ದರು.ಈ ಹಿಂದಿನ ಐದು ವರ್ಷಗಳ ಹಿಂದಿನ ಶಾಸಕರನ್ನು ಪರಿಹಾರಕ್ಕೆ ಏಕೆ ಒತ್ತಾಯಿಸಲಿಲ್ಲ ಎಂದು ಪ್ರಶ್ನಿಸಿದ ಶಾಸಕರು ಹೈ ಟೆನ್ಸನ್ ಲೈನ್ ಗೆ ಭೂಮಿ ನೀಡಿರುವ ರೈತರಿಗೆ ಪರಿಹಾರ ಕೊಡಿಸಲು ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು.
ನಾನು ಕೂಡಾ ರೈತ ಕುಟುಂಬದ ಹಿನ್ನೆಲೆಯಿಂದ ಬಂದವರಾಗಿದ್ದು ರೈತರ ಸಮಸ್ಯೆ ಏನೆಂಬುದು ನನಗೂ ಅರಿವಿದೆ.ರೈತರ ಸಮಸ್ಯೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಹಂತ ಹಂತವಾಗಿ ಬಗೆಹರಿಸಲಾಗುವುದು ಹತಾಶರಾಗುವುದು ಬೇಡ.ರೈತ ಸಂಘಟನೆಯ ಗುರುತರವಾದ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಬಾಲಕೃಷ್ಣ ತಿಳಿಸಿದರು.
ಹೇಮಾವತಿ ಯೋಜನೆ ದುಡ್ಡು ಹೊಡೆಯುವ ಸ್ಕೀಂ ಅಲ್ಲ:ಇತ್ತೀಚೆಗೆ ಸಂಸದ ಡಿ.ಕೆ.ಸುರೇಶ್ ಅವರ ಪರಿಶ್ರಮದಿಂದ ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ಯೋಜನೆಗೆ ರಾಜ್ಯ ಸರ್ಕಾರ 995 ಕೋಟಿ ರೂ ಬಿಡುಗಡೆಯಾಗಿದೆ.ಇದು ಹಣ ಹೊಡೆಯುವ ಸ್ಕೀಮ್ ಎಂದು ನಮ್ಮ ವಿರೋಧಿಗಳು ಹೇಳಿಕೆ ನೀಡಿದ್ದಾರೆ.ಹೇಮಾವತಿ ಯೋಜನೆ ನಮ್ಮ ಕನಸಿನ ಕೂಸಾಗಿದ್ದು ಈ ಯೋಜನೆ “ಹಣ ಹೊಡೆಯುವ ಸ್ಕೀಮೋ”ಅಥವಾ ಯೋಜನೆ ಪೂರ್ಣಗೊಳಿಸುವ ಸ್ಕೀಮೋ”ಎಂದು ಸದ್ಯದಲ್ಲಿಯೇ ಸ್ಪಷ್ಟವಾಗಿ ತಿಳಿಯಲಿದೆ.
ಈಗಾಗಲೇ ಟೆಂಡರ್ ಪ್ರಕ್ರಿಯೆ ಹಂತದಲ್ಲಿದ್ದು ಇದನ್ನು ಪೂರ್ಣಗೊಳಿಸಲು ನಾವು ಬದ್ಧರಾಗಿದ್ದೇವೆ.ಹಿಂದೆ ನಮ್ಮ ವಿರೋಧಿಗಳು ಜನರೇಟರ್ ಒಂದು ಬಾಕಿಯಿದೆ.ಅದರ ಬಟನ್ ಒತ್ತಿದರೆ ಮಾಗಡಿಗೆ ಹೇಮೆ ಹರಿಯಲಿದ್ದಾಳೆ ಎನ್ನುವವರು ಅರ್ಧ ಗಂಟೆ ಬಿಡುವು ಮಾಡಿಕೊಂಡು ನೀರು ಎಲ್ಲಿಂದ ಬರುತ್ತದೆ ಎಂಬುದನ್ನು ತೋರಿಸಲಿ ಎಂದು ಮಾಜಿ ಶಾಸಕರಿಗೆ ಬಾಲಕೃಷ್ಣ ಟಾಂಗ್ ನೀಡಿದರು.
ದಿಶಾಸಮಿತಿ ಸದಸ್ಯ ಜೆ.ಪಿ.ಚಂದ್ರೇಗೌಡ, ಗ್ರಾಪಂ ಅದ್ಯಕ್ಷೆ ರತ್ನಮ್ಮ, ಮಾಜಿ ಅದ್ಯಕ್ಷ ಎಂ.ಎಚ್.ಕಾಂತರಾಜು, ಮಾಜಿ ಸದಸ್ಯ ಮಾನಗಲ್ಲು ಮಂಜುನಾಥ್, ವಿಎಸ್ಎಸ್ಎನ್ ಕಾರ್ಯದರ್ಶಿ ಎಂ.ವಿ.ನಾಗೇಶ್, ಮುಖಂಡರಾದ ತ್ಯಾಗದರೆಪಾಳ್ಯ ರಂಗಸ್ವಾಮಣ್ಣ, ನರೇಂದ್ರಕುಮಾರ್, ಚನ್ನರಾಯಪ್ಪ, ಜಯರಾಂ, ಶಿವಣ್ಣ, ಕುಮಾರ್, ಮೂರ್ತಿ ನಾಯಕ್, ಬಸವೇನಹಳ್ಳಿ ಸುರೇಶ್, ಮಾನ ಗಲ್ಲು ಕೃಷ್ಣ, ರವಿಕುಮಾರ್, ಶಿವರುದ್ರಯ್ಯ, ಪಿಡಿಒ ರಾಜೀವ್, ಕಾರ್ಯದರ್ಶಿ ಶಿವಣ್ಣ, ತಾಲ್ಲೂಕು ವಿವಿಧ ಇಲಾಖೆಯ ಅಧಿಕಾರಿಗಳು ಮತ್ತಿತರಿದ್ದರು.