ಕೆ.ಆರ್.ಪುರ: ಜಾಗತಿಕ ಮಟ್ಟದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ನಾಲ್ಕನೇ ಅತಿದೊಡ್ಡ ತಂತ್ರಜ್ಞಾನ ಹಬ್ ಆಗಿ ಬೆಳದಿದ್ದು, ವರ್ಷಕ್ಕೆ ಸುಮಾರು 4.52 ಬಿಲಿಯನ್ ಡಾಲರ್ ಎಲೆಕ್ಟ್ರಾನಿಕ್ ಉಪಕರಣಗಳು ರಪ್ತಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕೇಂದ್ರ ಸರ್ಕಾರದ ಅನುದಾನದಲ್ಲಿ ನಿರ್ಮಿಸಿರುವ ಸೆಮಿಕಂಡಕ್ಟರ್ ಚಿಪ್ ತಯಾರಿಕೆ ಸೆಂಟರ್ ಆಫ್ ಎಕ್ಸಲೆನ್ಸ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು,ಭಾರತ ದೇಶದ ಸಾಫ್ಟವೇರ್ ಅಭಿವೃದ್ಧಿಯಲ್ಲಿ ಕರ್ನಾಟಕ ರಾಜ್ಯದ ಪಾಲು ಶೇಕಡಾ 63ರಷ್ಟಿದೆ ಹಾಗೂ ಐವತ್ತಕ್ಕೂ ಅಧಿಕ ಯೂನಿಕಾನ್9 ಕಂಪನಿಗಳು ಬೆಂಗಳೂರಿನಲ್ಲಿಯೇ ಇವೆ.
ನಮ್ಮ ರಾಜ್ಯ ಸರ್ಕಾರ 33 ದೇಶಗಳೊಂದಿಗೆ ಗ್ಲೋಬಲ್ ಇನ್ನೋವೇಶನ್ ಅಲೆಯನ್ಸ್ ಒಪ್ಪಂದ ಮಾಡಿಕೊಂಡಿದೆ,ಅದರಡಿಯಲ್ಲಿ ಕೇಂಬ್ರಿಡ್ಜ್ ನಂತಹ ಕಾಲೇಜುಗಳು ತಯಾರಿಸುವ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸೆಮಿಕಂಡಕ್ಟರ್ ತಯಾರಿಕೆಯ ಸೆಂಟರ್ ಆಫ್ ಎಕ್ಸಲೆನ್ಸ್ ಕೇಂದ್ರವನ್ನು ತೆರೆದ ದೇಶದ ಮೊದಲ ಎಂಬ ಹೆಗ್ಗಳಿಕೆಗೆ ಕೇಂಬ್ರಿಡ್ಜ್ ಶಿಕ್ಷಣ ಸಂಸ್ಥೆ ಪಾತ್ರವಾಗಿದೆ,ಇದಕ್ಕೆ ಉತ್ತೇಜನ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ, ಜಾಗತಿಕ ಸೆಮಿಕಂಡಕ್ಟರ್ ತಯಾರಿಕಾ ಕಂಪನಿಗಳಿಂದ ಮುಂದಿನ ದಿನಗಳಲ್ಲಿ 10 ಲಕ್ಷ ಸೆಮಿಕಂಡಕ್ಟರ್ ಚಿಪ್ ಡಿಸೈನರ್ ಗಳಿಗೆ ಬೇಡಿಕೆಯಿದೆ ಎಂದರು.
ಶಿಕ್ಷಣ ಎಂದರೆ ಕೇವಲ ಭೋದನೆಯಲ್ಲ,ಬದಲಾಗಿ ವಿದ್ಯಾರ್ಥಿಗಳನ್ನು ಇಂದಿನ ಉದ್ಯಮಕ್ಕೆ ತಯಾರು ಮಾಡುವುದಾಗಿದೆ,ಇದರಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗಿ ದೇಶದಲ್ಲಿನ ನಿರುದ್ಯೋಗ ಸಮಸ್ಯೆ ಕಡಿಮೆಯಾಗುತ್ತದೆ ಎಂದು ಹೇಳಿದರು.
ಅತ್ಮನಿರ್ಭರ್ ಮತ್ತು ಮೇಕ್ ಇನ್ ಇಂಡಿಯಾ ಇತ್ತೀಚಿನ ಘೋಷಣೆಗಳಾಗಿದ್ದು, 500 ವರ್ಷಗಳ ಹಿಂದೆಯೇ ಕರ್ನಾಟಕದಲ್ಲಿ ಜಾರಿಯಲ್ಲಿತ್ತು,ನಾಡಪ್ರಭು ಕೆಂಪೇಗೌಡರು ಬೆಂಗಳೂರನ್ನು ವ್ಯಾಪಾರ ವಹಿವಾಟು ನಗರವಾಗಿ 1537ರಲ್ಲಿ ಸ್ಥಾಪಿಸಿದರು ಎಂದರು.
ಮೈಸೂರು ರಾಜರ ದೂರದೃಷ್ಟಿ ಫಲವಾಗಿ ಕರ್ನಾಟಕ ಇಂದು ವಿದ್ಯಾಕಾಶಿಯಾಗಿ ಬೆಳಯುತ್ತಿದೆ ಹೊರರಾಜ್ಯಗಳಿಂದ ವಿದ್ಯಾರ್ಥಿಗಳು ಕರ್ನಾಟಕಕ್ಕೆ ಉನ್ನತ ವ್ಯಾಸಂಗ ಮಾಡಲು ಬರುತ್ತಿದ್ದಾರೆ ಎಂದರು.ಸಿನಾಪ್ಸಿಸ್ ಇಂಡಿಯಾ ಉಪಾಧ್ಯಕ್ಷ ಡಾ.ಶಿವಾನಂದ ಕೋಟೇಶ್ವರ ಮಾತನಾಡಿ,ಪೋಬ್ರ್ಸ್ ಪಟ್ಟಿಯಲ್ಲಿ ಇರುವ 400 ಕಂಪನಿಗಳು ಬೆಂಗಳೂರಿನಲ್ಲಿದ್ದು ಮುಂದೆ ಬೆಂಗಳೂರು ಸೆಮಿಕಂಡಕ್ಟರ್ ತಯಾರಿಕೆಯ ಕೇಂದ್ರಸ್ಥಾನವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೇಂಬ್ರಿಡ್ಜ್ ಕಾಲೇಜಿನ ಅಧ್ಯಕ್ಷ ಡಿ.ಕೆ.ಮೋಹನ್, ಸಿಇಓ ನಿತಿನ್ ಮೋಹನ್, ಪ್ರಾಂಶುಪಾಲರಾದ ಡಾ.ಜಿ.ಇಂದುಮತಿ, ಪ್ರೊ ಸರ್ ಸಿರಿಲ್, ಪ್ರಸನ್ನರಾಜ್,ಸಿನಾಪ್ಸಿಸ್ ಸಂಸ್ಥೆಯ ಟೆಕ್ನಿಕಲ್ ಪಬ್ಲಿಕೇಷನ್ ನಿರ್ದೇಶಕ ತನುಜಾ ಸತೀಶ್, ಡಾ.ಸಂಕಲ್ಪ ಸಿಂಗ್ ಉಪಸ್ಥಿತರಿದ್ದರು.