ಬೆಂಗಳೂರು: ಉದ್ಯಾನನಗರಿಯ ಕ್ರಿಕೆಟ್ ಅಭಿಮಾನಿಗಳ ಅಚ್ಚುಮೆಚ್ಚಿನ ಆಟಗಾರ್ತಿಯರಾದ ಸ್ಮೃತಿ ಮಂದಾನ ಮತ್ತು ಎಲಿಸ್ ಪೆರಿ ಅವರ ಜೊತೆಯಾಟದಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಜಯದ ಹಾದಿಗೆ ಮರಳಿತು.
ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಲೆಗ್ನ ಕೊನೆಯ ಪಂದ್ಯದಲ್ಲಿ ಆರ್ಸಿಬಿಯು 23 ರನ್ಗಳಿಂದ ಯು.ಪಿ. ವಾರಿಯರ್ಸ್ ವಿರುದ್ಧ ಜಯಿಸಿತು. ಟೂರ್ನಿಯ ಕಳೆದ ಎರಡೂ ಪಂದ್ಯಗಳಲ್ಲಿ ಆರ್ಸಿಬಿ ಸೋತಿತ್ತು. ತಂಡವು ಇಲ್ಲಿ ಆಡಿದ ಐದು ಪಂದ್ಯಗಳಲ್ಲಿ ಮೂರರಲ್ಲಿ ಜಯಿಸಿತು.
ಇದರಲ್ಲಿ ಒಟ್ಟು 373 ರನ್ಗಳು ಹರಿದವು. 11 ವಿಕೆಟ್ಗಳು ಪತನವಾದವು. ಪಂದ್ಯ ಗೆದ್ದ ನಂತರ ಆರ್ಸಿಬಿ ಆಟಗಾರ್ತಿಯರು ಮೈದಾನದಲ್ಲಿ ಒಂದು ಸುತ್ತು ಹಾಕಿ ಗ್ಯಾಲರಿಯಲ್ಲಿದ್ದ 24 ಸಾವಿರಕ್ಕೂ ಹೆಚ್ಚು ಅಭಿಮಾನಿಗಳತ್ತ ಕೈಬೀಸಿ, ಚಪ್ಪಾಳೆ ತಟ್ಟಿ ಕೃತಜ್ಞತೆ ಸಲ್ಲಿಸಿದರು.