ಇತ್ತೀಚೆಗೆ ಬೆಂಗಳೂರು ಜಲ ಮಂಡಳಿ ಅಧ್ಯಕ್ಷರು ನೀರಿನ ದುರ್ಬಳಕೆ ತಡೆಯಲು ಒಂದು ಪತ್ರಿಕಾ ಹೇಳಿಕೆಯನ್ನು ನೀಡಿ, ಯಾರು ವಾಹನಗಳನ್ನು ನೀರಿನಲ್ಲಿ ತೊಳೆಯುತ್ತಾರೋ ಅವರಿಗೆ 5000 ದಂಡ ವಿಧಿಸಲಾಗುವುದು ಎಂದು ಘೋಷಿಸಿದ್ದಾರೆ. ಬಹುಶಃ ಅದು ಕಾನೂನು ರೂಪವನ್ನು ಪಡೆದಿರಬಹುದು…..
ಇಲ್ಲಿ ಮುಖ್ಯವಾಗಿ ನಾವು ಚರ್ಚಿಸ ಬೇಕಾಗಿರುವುದು ದಂಡ ಗಳೇ ಎಲ್ಲಕ್ಕೂ ಪರಿಹಾರವಲ್ಲ ಅದೊಂದು ಸುಲಭ ತಂತ್ರಗಾರಿಕೆ ಯಾಗುತ್ತದೆಯಷ್ಟೇ.
ನೀರಿನ ನಿರ್ವಹಣೆಯ ಅಸಮರ್ಪಕತೆ, ನಗರ ಬೆಳವಣಿಗೆಯ ತಡೆಗಟ್ಟುವಿಕೆ, ಎಲ್ಲವನ್ನು ನಿರ್ಲಕ್ಷಿಸಿ ಸಾಮಾನ್ಯ ಜನರಿಗೆ ದಂಡ ಹಾಕುವುದೇ ಒಂದು ಮಹತ್ಕಾರ್ಯ ಎಂದು ನಮ್ಮ ಜನರನ್ನೇ ಶಿಕ್ಷಿಸುವುದು ಅಷ್ಟು ಒಳ್ಳೆಯ ಲಕ್ಷಣವಲ್ಲ….ಶಿಕ್ಷೆಗಿಂತ ಶಿಕ್ಷಣ ಮುಖ್ಯವಾಗಬೇಕು ಎಂಬುದು ನಮ್ಮೆಲ್ಲರ ಆಶಯ ಮತ್ತು ಅದು ಈ ನೆಲಕ್ಕೆ ಹೆಚ್ಚು ಹೊಂದಿಕೆಯಾಗುವ ವಿಷಯ.
ಯಾಕೆಂದರೆ ನಾವು ಒಂದಷ್ಟು ತಪ್ಪು, ಸೋಮಾರಿತನ ಎಲ್ಲ ಇದ್ದರೂ ಕೂಡ ಹೆಚ್ಚು ಸಭ್ಯತೆಯನ್ನು, ಭಯಮನಸ್ಥಿತಿಯನ್ನು ಹೊಂದಿರುವವರು. ಈ ಯುಗಾದಿ – ರಂಜಾನ್ ಹಬ್ಬದ ಸಂದರ್ಭದಲ್ಲಿ ಈ ರೀತಿಯ ಕಾನೂನು ಜನರನ್ನು ಬೆದರಿಸುವಂತಿದೆ. ಅಲ್ಲದೇ 5000 ಒಂದು ದೊಡ್ಡ ಮೊತ್ತ. ಅಲ್ಲದೇ ನೀರನ್ನು ಹೆಚ್ಚು ಖರ್ಚು ಮಾಡಿದ್ದಾರೆ ಎಂದು ನಿರ್ಧರಿಸುವ ಮಾನದಂಡಗಳು ಸಹ ತುಂಬಾ ಕಷ್ಟವಾಗುತ್ತದೆ…
ಎಷ್ಟೋ ಜನರಿಗೆ ಈ ನಿಯಮ ಇನ್ನೂ ತಿಳಿದುಬಂದಿಲ್ಲ. ಜನರು ಸಹ ಅಷ್ಟು ದೊಡ್ಡ ಮೊತ್ತದ ದಂಡವನ್ನು ವಿಧಿಸಿದಾಗ ರೊಚ್ಚಿಗೇಳುವ ಸಾಧ್ಯತೆಯೂ ಇದೆ. ಜಲಮಂಡಳಿಯ ಆತ್ಮೀಯ ಗೆಳೆಯರು ಕರೆ ಮಾಡಿ ಒಂದು ವೇಳೆ ನಾವು ಇಷ್ಟು ದೊಡ್ಡ ಮೊತ್ತವನ್ನು ದಂಡವಾಗಿ ಹಾಕಿದರೆ ಜನ ನಮ್ಮ ಮೇಲೆ ಹಲ್ಲೆ ಮಾಡುವ ಸಾಧ್ಯತೆಗಳಿವೆ. ಈ ಚುನಾವಣಾ ಸಂದರ್ಭದಲ್ಲಿ ಪೊಲೀಸರ ನೆರವುಸಹ ಸರಿಯಾಗಿ ಸಿಗುವುದಿಲ್ಲ. ಆದ್ದರಿಂದ ಇದನ್ನು ಮುಂದೂಡಬೇಕು ಅಥವಾ ಬೇರೆ ರೂಪದಲ್ಲಿ ಜನರಿಗೆ ಎಚ್ಚರಿಸುವ ಕೆಲಸ ಆಗಬೇಕು.
ಇಲ್ಲದಿದ್ದರೆ ಈ ಸರ್ಕಾರಗಳು ಜನರನ್ನು ನಿಯಂತ್ರಿಸಲು ಶಿಕ್ಷೆ – ದಂಡ ಇವುಗಳನ್ನೇ ಅಸ್ತ್ರಗಳನ್ನಾಗಿ ಮಾಡಿಕೊಳ್ಳುತ್ತಾರೆ. ಆದರೆ ಅದೇ ಸಮಯದಲ್ಲಿ ಪ್ರಜೆಗಳೇ ಪ್ರಭುಗಳು ಎಂದು ಹೇಳುತ್ತಾ, ಅವರನ್ನು ಶೋಷಿಸುತ್ತಾ, ತಾವು ಮಾತ್ರ ಜನರಿಗೆ ಕೈಮುಗಿದು ನಂತರ ಅವರ ಕಾಲು ಎಳೆಯುತ್ತಾರೆ. ಇದು ಜನರಿಂದಲೇ ಆಯ್ಕೆಯಾಗುವ ಸರ್ಕಾರಗಳ ಧೋರಣೆ.
ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕೈಮುಗಿಯುವ ಇವರು ಶಿಕ್ಷಾರ್ಹ ಕಾನೂನು ರೂಪಿಸುವಾಗ ಸ್ವಲ್ಪ ಸಂವೇದನೆ ಸೂಕ್ಷ್ಮತೆಯನ್ನು ಬೆಳೆಸಿಕೊಳ್ಳದಿದ್ದರೆ ತಪ್ಪಾಗುತ್ತದೆ ಯಲ್ಲವೇ…..ಸ್ವಲ್ಪ ಯೋಚಿಸಿ. ಅದರಿಂದ ನೀರಿನ ಉಳಿತಾಯ ಆಗುವ ಸಾಧ್ಯತೆ ಇರಬಹುದು. ಆದರೆ ಅದನ್ನು ತಡೆಯುವ ವಿಧಾನ ತುಂಬಾ ಕಠಿಣವಾಗುತ್ತದೆ. ನಿಯಮಗಳು ಸಾಧ್ಯವಾದಷ್ಟು ಸರಳವಾಗಿರಲಿ ಎಂಬ ಕಳಕಳಿಯ ಮನವಿ….