ಬೆಂಗಳೂರು: ನೂತನ ಸಂಸತ್ ಭವನಕ್ಕೆ ಅಪರಿಚಿತ ನುಗ್ಗಿದ ಹಿನ್ನೆಲೆಯಲ್ಲಿ ಮತ್ತು ಇತ್ತೀಚೆಗೆ ಶಾಲಾ ಕಾಲೇಜುಗಳು ಮತ್ತು ಇತರೆ ಸ್ಥಳಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿರುವ ಹಿನ್ನೆಲೆಯಲ್ಲಿ ಹೊಸ ವರ್ಷ ಆಚರಣೆ ಸಂಬಂಧ ಎಂ ಜಿ ರೋಡ್ ಸುತ್ತ ಮುತ್ತ ನಾಲ್ಕು 4 ಕಿಲೋ ಮೀಟರ್ವರೆಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಬಿಗಿ ಪೊಲೀಸ್ ವ್ಯವಸ್ಥೆ ಮಾಡಲು ಸಿದ್ಧತೆ ನಡೆದಿದೆ.
ಸುಮಾರು 4000 ಪೊಲೀಸರನ್ನು ಬ್ರಿಗೆಡ್ ರಸ್ತೆ ಮತ್ತು ಎಂ ಜಿ ರಸ್ತೆಯಲ್ಲಿ ನಡೆಯುವ ನೂತನ ವರ್ಷಾಚರಣೆ ಭದ್ರತೆಗೆ ಒದಗಿಸಲು ಪೊಲೀಸ್ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಈ ವಿಶೇಷ ಕರ್ತವ್ಯದಲ್ಲಿ ಭಾಗವಹಿಸುವ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಗುರುತಿನ ಚೀಟಿಯನ್ನು ಸಹ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.ಗಡಿಯಾರ ಗೋಪುರಗಳು, ಹೆಚ್ಚಿನ ಸಿಸಿ ಕ್ಯಾಮೆರಾಗಳನ್ನು ಸಹ ಅಳವಡಿಸಲಾಗುತ್ತದೆ. ಬ್ರಿಗೇಡ್ ರಸ್ತೆ ಮತ್ತು ಎಂ ಜಿ ರಸ್ತೆಯಲ್ಲಿರುವ ಎತ್ತರದ ಕಟ್ಟಡಗಳ ಮೇಲೆಯೂ ಸಹ ಪೊಲೀಸರನ್ನು ಭದ್ರತಾ ವ್ಯವಸ್ಥೆಗೆ ನೇಮಿಸಲಾಗುವುದು, ಸಾಧ್ಯವಾದರೆ ಡ್ರೋಣ್ ಬಳಕೆ ಮಾಡುತ್ತಾರೆ ಹಾಗೂ ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗೆ ಕೊಡುವ ಎಲ್ಲ ರಸ್ತೆಗಳನ್ನು ಬ್ಯಾರಿಕೇಡುಗಳಿಂದ ಮುಚ್ಚಲಾಗುವುದು.
ಇದಲ್ಲದೆ ಬೆಸ್ಕಾಂಮ್ ಅಧಿಕಾರಿಗಳ ಜೊತೆ ಚರ್ಚಿಸಿ ಬೀದಿ ದೀಪ ಆರಿಸದಂತೆ ಕೋರಲಾಗುವುದು.ಆಂಬುಲೆನ್ಸ್, ಅಗ್ನಿಶಾಮಕ ದಳ ಹಾಗೂ ಬಾಂಬ್ ನಿಷ್ಕ್ರಿಯದಳ, ಬಾಂಬ್ ಪತ್ತೆ ಮಾಡುವ ಶ್ವಾನದಳಗಳನ್ನು ಸಹ ನೇಮಕ ಮಾಡಲಾಗುತ್ತದೆ.4000 ಸಿವಿಲ್ ಪೊಲೀಸ್ ಮತ್ತು ಕೆಎಸ್ಆರ್ಪಿ ಹಾಗೂ ಸಿಏಆರ್ ಪೊಲೀಸರನ್ನು ಸಹ ನೇಮಕ ಮಾಡಲಾಗುತ್ತದೆ.
ಇದಲ್ಲದೆ ವಿಶೇಷವಾಗಿ ಮಹಿಳೆಯರಿಗಾಗಿ ಸುರಕ್ಷತೆ ದ್ವೀಪವನ್ನು ಸಹ ನಿರ್ಮಾಣ ಮಾಡಲಾಗುತ್ತದೆ.ರಿಚ್ಮಂಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಬ್ರಿಗೇಡ್ ರಸ್ತೆ, ಎಂಜಿ ರಸ್ತೆ, ಮ್ಯೂಸಿಯಂ ರಸ್ತೆ, ವಿಠ್ಠಲ್ ಮಲ್ಯ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ರಸ್ತೆ ಸೇರಿದಂತೆ ನಗರದ 115 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಹ ಹೆಚ್ಚಿನ ನಿಗಾವಹಿಸಲಾಗುವುದೆಂದು ಉನ್ನತ ಮಟ್ಟದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಿಳಾ ಪೊಲೀಸ್ ಸಿಬ್ಬಂದಿಗಳನ್ನು ಸಹ ನೇಮಿಸಲಾಗುತ್ತದೆ ಹಾಗೂ ಇದೆಲ್ಲದೆ ಬೆಂಗಳೂರು ನಗರಕ್ಕೆ ಬರುವ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳಲ್ಲಿಯೂ ಸಹ ಸಂಪೂರ್ಣ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತದೆ.ಬೆಂಗಳೂರು ನಗರ ಪೊಲೀಸ್ ಕಂಟ್ರೋಲ್ ರೂಮ್ ಅನ್ನು ಸಹ ಸಜ್ಜುಗೊಳಿಸಲಾಗುತ್ತದೆ.
ಸಂಚಾರ ಪೊಲೀಸರು ಸಂಜೆ 4 ಗಂಟೆಯಿಂದಲೇ ಕೆಲವು ರಸ್ತೆಗಳಲ್ಲಿ ನಿರ್ಬಂಧವನ್ನು ಸಹ ಹೇರಲಿದ್ದಾರೆ. ಸುಮಾರು 40 ಬಾಂಬ್ ಪತ್ತೆ ಮಾಡುವ ಶ್ವಾನಗಳನ್ನು ಹಾಗೂ ಬಾಂಬ್ ಏನಾದರೂ ಪತ್ತೆಯಾದ ಪಕ್ಷದಲ್ಲಿ ನಿಷ್ಕ್ರೀಯಗೊಳಿಸುವ ಸಿಬ್ಬಂದಿಗಳನ್ನು ಸಕಲ ಉಪಕರಣಗಳೊಂದಿಗೆ ನೇಮಕ ಮಾಡಿ ಯಾವುದೇ ಅಹಿತಕರ ಘಟನೆ ಹೊಸ ವರ್ಷ ಆಚರಣೆ ದಿನದಂದು ನಡೆಯದಂತೆ ಕಟ್ಟೆಚ್ಚರ ವಹಿಸಲು ಕ್ರಮಕೈಗೊಳ್ಳಲಾಗುತ್ತಿದೆ.