ಬೆಂಗಳೂರು: ಛಲದ ಆಟವಾಡಿದ ಇಟಲಿಯ ಸ್ಟಿಫಾನೊ ನೆಪೊಲಿಟಾನೊ ಭಾನುವಾರ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ಸ್ ಟೆನಿಸ್ ಟೂರ್ನಿಯಲ್ಲಿ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಅಂಗಣದಲ್ಲಿ ನಡೆದ ಫೈನಲ್ನಲ್ಲಿ ಸ್ಟಿಫಾನೊ 4-6, 6-3, 6-3ರಿಂದ ದಕ್ಷಿಣ ಕೊರಿಯಾದ ಸಿಯಾಂಗ್ಚಾನ್ ಹಾಂಗ್ ವಿರುದ್ಧ ಜಯಿಸಿದರು.
ವಾರಾಂತ್ಯದ ರಜೆ ದಿನ ಟೆನಿಸ್ ಕಣ್ತುಂಬಿಕೊಳ್ಳಲು ಸೇರಿದ್ದ ಪ್ರೇಕ್ಷಕರನ್ನು ಇಬ್ಬರೂ ಆಟಗಾರರು ನಿರಾಸೆಗೊಳಿಸಲಿಲ್ಲ. ಮೊದಲ ಸೆಟ್ನ್ನಲ್ಲಿ ಇಬ್ಬರ ಹೋರಾಟವೂ ರೋಚಕವಾಗಿತ್ತು. ಉತ್ತಮ ಸರ್ವ್ ಮತ್ತು ಕ್ರಾಸ್ಕೋರ್ಟ್ ರಿಟರ್ನ್ಗಳನ್ನು ಆಡಿದ ಸಿಯಾಂಗ್ ಚಾನ್ 6-4ರಿಂದ ಈ ಸೆಟ್ನಲ್ಲಿ ಗೆದ್ದರು.
ಆದರೆ ಇಟಲಿಯ ಆಟಗಾರ ಚುರುಕಾದ ಆಟ ತೋರಿದರು. ಉತ್ತಮವಾದ ಬ್ಯಾಕ್ಹ್ಯಾಂಡ್ ಮತ್ತು ಶರವೇಗದ ರಿಟರ್ನ್ಗಳನ್ನು ಆಡಿದ ಅವರು ಹಾಂಗ್ಗೆ ತಿರುಗೇಟು ನೀಡಿದರು. ನಂತರದ ಎರಡೂ ಸೆಟ್ಗಳಲ್ಲಿ ಪಾರಮ್ಯ ಮೆರೆದರು.