ಆಂಧ್ರದ ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದಲ್ಲಿ, ಆಸೀಸ್ ಮಹಿಳಾ ತಂಡ ಬಾಂಗ್ಲಾದೇಶದ ಮಹಿಳಾ ತಂಡವನ್ನು೧೦ ವಿಕೆಟ್ಗಳ ಅಂತರದಿಂದ ಸೋಲಿಸಿತು.
ನಾಯಕಿ ಅಲಿಸಾ ಹೀಲಿ ಅವರು ಈ ಪಂದ್ಯಾವಳಿಯಲ್ಲಿ ತಮ್ಮ ಎರಡನೇ ಶತಕವನ್ನು ದಾಖಲಿಸಿದರು.ಟಾಸ್ ಸೋತು ಮೊದಲು ಬೌಲಿಂಗ್ ಮಾಡಿದ ಆಸ್ಟ್ರೇಲಿಯಾ, ಬಾಂಗ್ಲಾದೇಶವನ್ನು ೯ ವಿಕೆಟ್ಗೆ ೧೯೮ ರನ್ಗಳಿಗೆ ಸೀಮಿತಗೊಳಿಸಿತು. ೧೯೯ ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ್ದ ಆಸೀಸ್
ಮಹಿಳಾ ಪಡೆ, ನಾಯಕಿ ಅಲಿಸಾ ಹೀಲಿ (೭೭ ಎಸೆತಗಳಲ್ಲಿ ೧೧೩ ರನ್-ನಾಟೌಟ್) ಮತ್ತು ಫೋಬೆ ಲಿಚ್ಫೀಲ್ಡ್ (೭೨ ಎಸೆತಗಳಲ್ಲಿ ೮೪ ರನ್-ನಾಟೌಟ್)
ಅವರ ಆಕ್ರಮಣಕಾರಿ ಬ್ಯಾಟಿಂಗ್ ನೆರವಿನಿಂದ ೨೪.೫ ಓವರ್ಗಳಲ್ಲಿ ೨೦೨ ರನ್ ಗಳಿಸಿ ಸುಲಭವಾಗಿ ಗುರಿಯನ್ನು ತಲುಪಿತು.
ಏಳು ಬಾರಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ಮಹಿಳಾ ತಂಡ, ಎದುರಾಳಿ ಬಾಂಗ್ಲಾದೇಶವನ್ನು ಸುಲಭವಾಗಿ ಮಣಿಸಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ. ಅಲಿಸಾ ಹೀಲಿ ತಮ್ಮ ಇನ್ನಿಂಗ್ಸ್ನಲ್ಲಿ ಒಟ್ಟು ೨೦ ಬೌಂಡರಿಗಳನ್ನು ಬಾರಿಸಿದ್ದು, ಫೋಬೆ ಲಿಚ್ಫೀಲ್ಡ್ ಒಟ್ಟು ೧೨ ಬೌಂಡರಿ ಮತ್ತು ಸಿಕ್ಸರ್ ಬಾರಿಸಿ ಗಮನ ಸೆಳೆದರು. ಬಾಂಗ್ಲಾ ದೇಶದ ಪ್ರಮುಖ ಅಸ್ತ್ರವೆಂದು ಪರಿಗಣಿಸಲಾದ ಸ್ಪಿನ್ ದಾಳಿಯು, ಹೀಲಿ ಮತ್ತು ಲಿಚ್ಫೀಲ್ಡ್ ಅವರ ಆಕ್ರಮಣಕಾರಿ ಬ್ಯಾಟಿಂಗ್ಗೆ ನಿರುತ್ತರವಾಗಿತ್ತು.
ಇಬ್ಬರೂ ಆಟಗಾರರು ಬಾಂಗ್ಲಾದೇಶದ ಬೌಲರ್ಗಳ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸಿದ್ದು, ಈ ಪಂದ್ಯದ ವಿಶೇಷವಾಗಿತ್ತು. ಟಾಸ್ ಗೆದ್ದು ಬ್ಯಾಟಿಂಗ್
ಆಯ್ದುಕೊಂಡ ಬಾಂಗ್ಲಾದೇಶ ತಂಡಕ್ಕೆ, ರುಬಿಯಾ ಹೈದರ್ ಮತ್ತು ಶೋಬಾನಾ ಮೋಸ್ಟಾರಿ ಅವರ ಉತ್ತಮ ಆರಂಭ ದೊರೆಯಿತು. ಮೊಸ್ಟಾರಿ ಅವರು ೮೦
ಎಸೆತಗಳಲ್ಲಿ ೬೬ ರನ್ ಬಾರಿಸಿ ನಾಟೌಟ್ ಆಗಿ ಉಳಿದರು. ಮೊಸ್ಟಾರಿ ಅವರ ೬೬ ರನ್ಗಳು ಮಹಿಳಾ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶದ
ಬ್ಯಾಟ್ಸ್ಮನ್ ಗಳಿಸಿದ ಅತ್ಯಧಿಕ ವೈಯಕ್ತಿಕ ಸ್ಕೋರ್ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.
ಹೈದರ್ ಮತ್ತು ಮೋಸ್ಟಾರಿ ಅವರ ಅಮೋಘ ಬ್ಯಾಟಿಂಗ್ ಹೊರತಾಗಿಯೂ, ಬಾಂಗ್ಲಾದೇಶ ತಂಡಕ್ಕೆ ಇನ್ನಿಂಗ್ಸ್ ಅಗತ್ಯವಾದ ವೇಗ ಸಿಗಲಿಲ್ಲ. ಹೈದರ್ ಮತ್ತು ಫರ್ಗಾನಾ ಹೋಕ್ ಆರಂಭಿಕ ಜೊತೆಯಾಟದಲ್ಲಿ ಒಂಬತ್ತು ಓವರ್ಗಳಲ್ಲಿ ೩೨ ರನ್ಗಳನ್ನು ಗಳಿಸಿದ್ದ ಬಾಂಗ್ಲಾದೇಶ, ನಂತರ ರನ್ಗಳಿಸಲು ಹರಸಾಹಸಪಡಬೇಕಾಯಿತು.