ಟಿ20 ವಿಶ್ವಕಪ್ನ 15ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ್ ತಂಡ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡವು ಶ್ರೀಲಂಕಾ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಲಂಕಾ ತಂಡಕ್ಕೆ ಆರಂಭಿಕ ಆಟಗಾರ ಪಾತುಮ್ ನಿಸ್ಸಂಕಾ ಉತ್ತಮ ಆರಂಭ ಒದಗಿಸಿದ್ದರು. 28 ಎಸೆತಗಳನ್ನು ಎದುರಿಸಿದ ನಿಸ್ಸಂಕಾ 1 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 47 ರನ್ ಬಾರಿಸಿ ಔಟಾದರು.
ಆದರೆ ನಿಸ್ಸಂಕಾ ನಿರ್ಗಮನದ ಬಳಿಕ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಧನಂಜಯ ಡಿಸಿಲ್ವಾ 21 ರನ್ ಬಾರಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ಗಳು ರನ್ಗಳಿಸಲು ಪರದಾಡಿದರು. ಪರಿಣಾಮ ಶ್ರೀಲಂಕಾ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 124 ರನ್ಗಳಿಸಲಷ್ಟೇ ಶಕ್ತವಾಯಿತು.
ಬಾಂಗ್ಲಾದೇಶ್ ಪರ ಉತ್ತಮ ದಾಳಿ ಸಂಘಟಿಸಿದ ಮುಸ್ತಫಿಜುರ್ ರೆಹಮಾನ್ 4 ಓವರ್ಗಳಲ್ಲಿ 17 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಉತ್ತಮ ಸಾಥ್ ನೀಡಿದ ರಿಶಾದ್ ಹೊಸೈನ್ 4 ಓವರ್ಗಳಲ್ಲಿ 22 ರನ್ ನೀಡಿ 3 ವಿಕೆಟ್ ಪಡೆದರು.ಇನ್ನು 125 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 6 ರನ್ಗಳಿಸುವಷ್ಟರಲ್ಲಿ ಇಬ್ಬರು ಆರಂಭಿಕರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಈ ಹಂತದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಲಿಟ್ಟನ್ ದಾಸ್ 38 ಎಸೆತಗಳಲ್ಲಿ 36 ರನ್ ಬಾರಿಸಿ ತಂಡಕ್ಕೆ ಆಸರೆಯಾಗಿ ನಿಂತರು. ಮತ್ತೊಂದೆಡೆ ತೌಹಿದ್ ಹೃದೋಯ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು.20 ಎಸೆತಗಳನ್ನು ಎದುರಿಸಿದ ಹೃದೋಯ್ 4 ಭರ್ಜರಿ ಸಿಕ್ಸ್ ಹಾಗೂ 1 ಫೋರ್ನೊಂದಿಗೆ 40 ರನ್ ಕಲೆಹಾಕಿದರು. ಆದರೆ ಅಂತಿಮ ಓವರ್ಗಳ ವೇಳೆ ಲಿಟ್ಟನ್ ದಾಸ್ ಹಾಗೂ ತೌಹಿದ್ ಹೃದೋಯ್ ವಿಕೆಟ್ ಕಬಳಿಸುವ ಮೂಲಕ ಶ್ರೀಲಂಕಾ ಬೌಲರ್ಗಳು ಪಂದ್ಯದ ಮೇಲೆ ಹಿಡಿತ ಸಾಧಿಸಿದರು.
ಪರಿಣಾಮ ಕೊನೆಯ 12 ಎಸೆತಗಳಲ್ಲಿ ಬಾಂಗ್ಲಾದೇಶ್ ತಂಡಕ್ಕೆ 11 ರನ್ಗಳ ಅವಶ್ಯಕತೆಯಿತ್ತು. ಅತ್ತ ಶ್ರೀಲಂಕಾ ತಂಡಕ್ಕೆ 2 ವಿಕೆಟ್ಗಳ ಅಗತ್ಯತೆಯಿತ್ತು. ಆದರೆ ದಸುನ್ ಶಾನಕ ಎಸೆದ 19ನೇ ಓವರ್ನ ಮೊದಲ ಎಸೆತದಲ್ಲೇ ಸಿಕ್ಸ್ ಸಿಡಿಸುವ ಮೂಲಕ ಮಹಮ್ಮದುಲ್ಲಾ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.