ಕಲಾಗಂಗೋತ್ರಿ ತಂಡ ಅಭಿನಯಿಸಿದ ನಾಟಕ, ಡಾ.ಬಿ ವಿ ರಾಜಾರಾಂ ಅವರ ನಿರ್ದೇಶನದಲ್ಲಿ ಇಂದು ರವೀಂದ್ರಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡಿತು.ಹಣ ಮಾಡುವುದೊಂದೇ ಧ್ಯೇಯ ಇಟ್ಟುಕೊಂಡು ಬಂಗಾರದ ಪುತ್ಥಳಿ ಪಲ್ಲಂಗ ಮಾಡಿಸಿಕೊಂಡ ಪುಢಾರಿ ಮುಂದೆಯೂ ಬಂಗಾರದ ತಗಡನ್ನು ಗೋಡೆಗೆ ಹಾಕಲು ಬೇಕಾದ ಕುತಂತ್ರಗಳನ್ನು ಮಾಡುತ್ತಾ ತನ್ನ ಹಿಂಬಾಲಕರನ್ನು ಉಪಯೋಗಿಸುಕೊಳ್ಳುವ ರೀತಿ ಹಾಗು ಇಂಥಾ ಪುಢಾರಿಗಳನ್ನು ಬೆಂಬಲಿಸಿ ತಮ್ಮ ಬೆಳೆ ಬೇಯಿಸಿಕೊಳ್ಳುವ ಸನ್ಯಾಸಿಗಳು,
ಜ್ಯೋತಿಷಿಗಳು ಒಂದು ಕಡೆ ಯಾದರೆ, ಅವನ ಮಗ ವಿದ್ಯಾವಂತ ಸಾಮಾಜಿಕ ಕಳಕಳಿಯನ್ನು ಪ್ರತಿಬಿಂಬಿಸುವ, ಸದ್ಯದ ರಾಜಕೀಯ ಹತ್ತು ಹಲವಾರು ಹೊಲಸುಗಳನ್ನುಪರಿಚಯಿಸುತ್ತಾ ಮೌಲ್ಯಾಧಾರಿತ ರಾಜಕಾರಣ ಈಗ ಬೇಕು ಎನ್ನುವ ಯುವಕ ಹಾಗು ಅವನ ಗೆಳೆಯರು. ಕೊನೆಗೆ ಕುತಂತ್ರಕ್ಕೆ, ರಾವಣನ ಮನಸ್ಥಿತಿಗೆ ಸಾವು. ಮೌಲ್ಯಕ್ಕೆ ಬೆಲೆ ಎಂಬುದೇ ಈ ನಾಟಕದ ತಿರುಳು.
ಕಲಾಗಂಗೋತ್ರಿಯ ನುರಿತ ನಟ ನಟಿಯರ ಅಭಿನಯ ಅದ್ಭುತವಾಗಿತ್ತು.. ಅದರಲ್ಲೂ ಭಟ್ಟರ ಅಭಿನಯ ಅಮೋಘವಾಗಿತ್ತು. ಈ ನಾಟಕದಲ್ಲಿ ಹಾಸ್ಯದ ಜೊತೆ ಗಂಭೀರ ರಾಜಕೀಯ ವಿಡಂಬನ ವಿಷಯ ಪ್ರಕ್ಷಕರ ಮನ ಮುಟ್ಟುವಲ್ಲಿ ಕಲಾಗಂಗೋತ್ರಿ ತಂಡ ಯಶಸ್ವಿಯಾಯಿತು.
ನಿರ್ದೇಶನ, ರಂಗಸಜ್ಜಿಕೆ, ಪ್ರಸಾದನ, ಪರಿಕರಗಳು, ಬೆಳಕು ನಾಟಕಕ್ಕೆ ಪೂರಕವಾಗಿದ್ದವು. ಪರಿಕರಗಳು ರಂಗದ ಮೇಲೆ ಬರುವಾಗ ಮತ್ತು ಹೋಗುವಾಗ ಸ್ವಲ್ಪ ತಡವರಿಸಿದವು ಬಿಟ್ಟರೆ ಎಲ್ಲವೂ ಸುಂದರವಾಗಿತ್ತು.ಶ್ರೀ ರಾಮ ಪ್ರತಿಷ್ಠಾಪನೆ ಜೊತೆಗೆ ರಾಜಕೀಯ ರಾವಣರ ಮನಸ್ಥಿತಿಯ ಅನಾವರಣವಾಗುತ್ತಿರುವ ಈ ವಿಶಿಷ್ಟ ಸ್ಥಿತ್ಯಂತರ ಕಾಲಘಟ್ಟದಲ್ಲಿ, ಈ ನಾಟಕ ಪ್ರಸ್ತುತ. ಆದುದರಿಂದ ಈ ನಾಟಕ ಮುಂದೆ ಹಲವಾರು ಸ್ಥಳಗಳಲ್ಲಿ ಪ್ರದರ್ಶನ ಗೊಂಡರೆ ಸಾಮಾಜಿಕ ಬದಲಾವಣೆಗೆ ತನ್ನ ಕೊಡುಗೆ ಕೊಡುವುದರಲ್ಲಿ ಸಂಶಯವಿಲ್ಲ.
-ಪ್ರಭಂಜನ