ಬೆಂಗಳೂರು: ನಮ್ಮ ನಾಯಕರು ಸೂಚಿಸಿದರೆ ರಾಜೀನಾಮೆ ಕೊಡಲು ಸಿದ್ಧನಿದ್ದೇನೆ ಎಂದು ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದರ ಹಿಂದೆ ದೊಡ್ಡ ಜಾಲವೇ ಇದೆ. ಎಲ್ಲವೂ ತನಿಖೆಯಲ್ಲಿ ಬಹಿರಂಗವಾಗಲಿದೆ. ಎಸ್ಐಟಿ ತನಿಖೆ ನಡೆಯುತ್ತಿದೆ. ಸಿಬಿಐ ಕೂಡ ತನಿಖೆ ನಡೆಸುತ್ತಿದೆ. ಯಾರೇ ಕರೆದರೂ ಹೋಗುತ್ತೇನೆ ತನಿಖೆಗೆ ಸಹಕಾರ ಕೊಡುತ್ತೇನೆ ಎಂದು ತಿಳಿಸಿದ್ದಾರೆ.
ಇಡೀ ಪ್ರಕರಣದಲ್ಲಿ ನನ್ನದು ಯಾವ ಪಾತ್ರವೂ ಇಲ್ಲ. ನಾನು ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಚುನಾವಣಾ ನೀತಿ ಸಂಹಿತೆ ಬಂತು. ಆದ್ದರಿಂದ ನಾನು ಯಾವುದೇ ಸಭೆ ನಡೆಸಿಲ್ಲ. ನೀತಿ ಸಂಹಿತೆ ಮುಗಿದಿದೆ ಈಗ ಎಲ್ಲಾ ಮಾಹಿತಿ ಪಡೆಯುತ್ತೇನೆ ಎಂದರು.ನನ್ನ ಯಾವ ಪಾತ್ರವೂ ಇಲ್ಲಾ. ವಾಟ್ಸಪ್ ಚಾಟ್ ಅಥವಾ ಯಾವುದೇ ಸಾಕ್ಷ್ಯ ಇದ್ದರೂ ಎಲ್ಲವೂ ತನಿಖೆಯಲ್ಲಿ ಬಹಿರಂಗ ಆಗಲಿದೆ. ಯಾವ ಸಾಕ್ಷ್ಯವೂ ನಾಶ ಮಾಡಿಲ್ಲ. ಇಡಿ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ ಎಲ್ಲವೂ ತನಿಖೆಯಲ್ಲಿ ಬಹಿರಂಗವಾಗಲಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ತಿಳಿಸಿದರು.
ಸಚಿವ ಶರಣಪ್ರಕಾಶ್ ಪಾಟೀಲ್ ಹೆಸರು ತಳುಕು ಹಾಕಿಕೊಂಡಿರುವ ವಿಚಾರವಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾತನಾಡಿ, ತನಿಖೆ ನಡೆಯುತ್ತಿರುವಾಗ ಅನೇಕ ವಿಚಾರ ಬರುತ್ತದೆ. ಯಾರು ಅಪರಾಧಿ ಸ್ಥಾನದಲ್ಲಿ ಇರುತ್ತಾರೆ ಅವರು ಹೇಳಿಕೆ ನೀಡುತ್ತಾರೆ. ಈ ಬಗ್ಗೆ SIT ತನಿಖೆ ಮಾಡುತ್ತೆ ಎಂದು ಹೇಳಿದರು.
ಶರಣಪ್ರಕಾಶ್ ಪಾಟೀಲ್ ರಾಜೀನಾಮೆಗೆ ಬಿಜೆಪಿ ಒತ್ತಾಯ ವಿಚಾರವಾಗಿ ಮಾತನಾಡಿದ ಅವರು, ಯಾರು ಏನೇ ಹೇಳಿದರೂ ಅದನ್ನ ಪರಿಶೀಲನೆ ಮಾಡಬೇಕಾಗುತ್ತದೆ. ಅಗತ್ಯವಿದ್ದರೆ ಎಸ್ಐಟಿ ಅಧಿಕಾರಿಗಳು ಸಹ ವಿಚಾರಣೆ ಮಾಡುತ್ತಾರೆ ಎಂದರು.ಸಚಿವ ಶರಣಪ್ರಕಾಶ್ ಪಾಟೀಲ್ ಒಬ್ಬ ಅಪ್ಪಟ ಪ್ರಾಮಾಣಿಕ ವ್ಯಕ್ತಿ. ಈ ಮಾತನ್ನು ಬಹಳ ಗರ್ವದಿಂದ ಹೇಳುತ್ತೇನೆ. ಸಾಕ್ಷ್ಯ ನಾಶ ಮಾಡುವಂತ ಕೆಲಸಕ್ಕೆ ಶರಣಪ್ರಕಾಶ್ ಹೋಗುವುದಿಲ್ಲ. ದಯವಿಟ್ಟು ಶರಣಪ್ರಕಾಶ್ ಪಾಟೀಲ್ ಹೆಸರನ್ನು ತಳುಕು ಹಾಕಬೇಡಿ. ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಒಬ್ಬ ಫ್ರಾಡ್ ಎಂದು ಎಂ.ಬಿ.ಪಾಟೀಲ್ ಹೇಳಿದರು.