ಬೆಂಗಳೂರು: 2024 ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಡಕತ್ತರಿಯಲ್ಲಿ ಸಿಲುಕಿದ್ರಾ ಎಂಬ ಪ್ರಶ್ನೆ ಎದ್ದಿದೆ.ಹಾವೇರಿ-ಗದಗ ಲೋಕಸಭಾ ಕ್ಷೇತ್ರಕ್ಕೆ ಬಸವರಾಜ ಬೊಮ್ಮಾಯಿ ಅವರ ಹೆಸರು ಮುನ್ನೆಲೆಗೆ ಬಂದ ಕಾರಣ, ರಾಜಕಾರಣದಲ್ಲಿ ಅಡಕತ್ತರಿಗೆ ಬಸವರಾಜ ಬೊಮ್ಮಾಯಿ ಸಿಲುಕಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಆರಂಭವಾಗಿದೆ.
ಅಷ್ಟಕ್ಕೂ ಈ ರೀತಿಯ ಪ್ರಶ್ನೆ ಏಳಲು ಪ್ರಮುಖ ಕಾರಣವೇ, ಸದ್ಯ ಬಸವರಾಜ ಬೊಮ್ಮಾಯಿ ಅವರನ್ನು ಹಾವೇರಿ-ಗದಗ ಕ್ಷೇತ್ರದಿಂದ ಅಭ್ಯರ್ಥಿ ಮಾಡಬೇಕೆಂಬ ಹೈಕಮಾಂಡ್ ನಾಯಕರ ಸಲಹೆ ಮೇರೆಗೆ ಎಂಬುದು. ಅಷ್ಟಕ್ಕೂ ಬಸವರಾಜ ಬೊಮ್ಮಾಯಿ ಚುನಾವಣೆಗೆ ಸ್ಫರ್ಧೆ ಮಾಡಿದ್ದೇ ಆದರೆ, ಅಡಕತ್ತರಿಯಲ್ಲಿ ಹೇಗೆ ಸಿಲುಕಿದಂತಾಗುತ್ತದೆ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಬಸವರಾಜ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರು ಕೂಡ. ಈಗ ಲೋಕಸಭಾ ಚುನಾವಣೆಯಲ್ಲಿ ಹಾವೇರಿ-ಗದಗ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಬೊಮ್ಮಾಯಿಗೆ ಹೈಕಮಾಂಡ್ ನಾಯಕರ ಸೂಚನೆಯನ್ನು ನೀಡಿದ್ದಾರೆ. ಈ ಸೂಚನೆ ಬಂದಾಗಿನಿಂದಲೂ ಇಕ್ಕಟ್ಟಿಗೆ ಸಿಲುಕಿ, ಯಾವ ನಿರ್ಧಾರ ತೆಗೆದುಕೊಳ್ಳಬೇಕೆಂದು ಬಸವರಾಜ ಬೊಮ್ಮಾಯಿ ಚಿಂತಿಸುತ್ತಿದ್ದಾರೆ ಎನ್ನಲಾಗಿದೆ.
ಇತ್ತ ಹೈಕಮಾಂಡ್ ನಾಯಕರು ರಾಜ್ಯ ರಾಜಕಾರಣ ಬಿಟ್ಟು ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ಸೂಚನೆ ಕೊಟ್ಟ ಬೆನ್ನಲ್ಲೇ, ಬಸವರಾಜ ಬೊಮ್ಮಾಯಿ ಆತಂಕಕ್ಕೊಳಗಾಗಿದ್ದಾರೆ. ಬೊಮ್ಮಾಯಿಗೆ ಸ್ಫರ್ಧೆ ಮಾಡಲು ಹೈಕಮಾಂಡ್ ನಾಯಕರು ಸೂಚಿಸಿರುವುದು ಹಾವೇರಿ-ಗದಗ ಕ್ಷೇತ್ರದಿಂದ. ಹಾವೇರಿ-ಗದಗ ಕಿತ್ತೂರು ಕರ್ನಾಟಕ ಭಾಗಕ್ಕೆ ಸೇರಲಿದೆ. ಹಾವೇರಿ-ಗದಗ, ಧಾರವಾಡ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ ಹಾಗೂ ವಿಜಯಪುರ ಈ 6 ಕ್ಷೇತ್ರಗಳು ಕಿತ್ತೂರು ಕರ್ನಾಟಕ ಭಾಗಕ್ಕೆ ಸೇರಲಿದೆ. ಹಾವೇರಿ-ಗದಗ ಕ್ಷೇತ್ರದಿಂದ ಬಸವರಾಜ ಬೊಮ್ಮಾಯಿ ಕಣಕ್ಕೇನೋ ಇಳಿಯಬಹುದು ಸಮಸ್ಯೆಯಿಲ್ಲ.
ಆದ್ರೆ, ಇದೇ ಪ್ರಾಂತ್ಯಕ್ಕೆ ಸೇರಿರುವ ಧಾರವಾಡದ ಹಾಲಿ ಸಂಸದ ಪ್ರಹ್ಲಾದ್ ಜೋಶಿ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಮುಂದೆ ಬೆಳಗಾವಿ ಕ್ಷೇತ್ರಕ್ಕೆ ಒಂದು ವೇಳೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆಗಮಿಸಿ ಗೆದ್ದು ಸಂಸತ್ಗೆ ಬಂದರೆ? ಇತ್ತ ಬಾಗಲಕೋಟೆಯ ಹಾಲಿ ಸಂಸದ ಪಿ.ಸಿ.ಗದ್ದೀಗೌಡರ್ಗೆ ಈವರೆಗೆ ಕೇಂದ್ರದಲ್ಲಿ ಸಚಿವ ಸ್ಥಾನ ಸಿಕ್ಕಿಲ್ಲ. ಈಗ ಅವರು ಕೂಡ ಹಿರಿಯರಿದ್ದಾರೆ. ಅವರನ್ನು ಹೈಕಮಾಂಡ್ ನಾಯಕರು ಪರಿಗಣಿಸಬಹುದು. ಒಂದು ಕಡೆ ಪ್ರಹ್ಲಾದ್ ಜೋಶಿ ಮುಂದುವರೆಯುತ್ತಾರೆ. ಇನ್ನೊಂದು ಕಡೆ ತಮ್ಮದೇ ಸಮುದಾಯದವಾದ ವೀರಶೈವ- ಲಿಂಗಾಯತ ಸಮುದಾಯಕ್ಕೆ ಜಗದೀಶ್ ಶೆಟ್ಟರ್ ಹಾಗೂ ಪಿ.ಸಿ.ಗದ್ದೀಗೌಡರ್ ಸೇರಿದ್ದಾರೆ. ಕೇಂದ್ರದಲ್ಲಿ ಸಚಿವ ಸ್ಥಾನ ಎಂದರೆ, ಈ ಇಬ್ಬರು ನಾಯಕರನ್ನು ಪರಿಗಣಿಸುತ್ತಾರೆ.
ತಾವು ಕೂಡ ರಾಷ್ಟ್ರ ರಾಜಕಾರಣಕ್ಕೆ ಹೋದ್ರೆ ಅತಂತ್ರ ಆಗುತ್ತೇನೋ ಎಂಬ ಆತಂಕ ಸ್ವಲ್ಪಮಟ್ಟಿಗೆ ಕಾಡುತ್ತಿದೆ.
ಇನ್ನು ತಮಗೆ ಈಗಾಗಲೇ ಮುಖ್ಯಮಂತ್ರಿ ಎಂಬ ದೊಡ್ಡ ಹುದ್ದೆಯೇ ಸಿಕ್ಕಿತ್ತು. ರಾಜ್ಯದಲ್ಲಿ ಸದ್ಯ ಶಾಸಕನಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದೇನೆ. ಇದೇ ಅವಧಿಯಲ್ಲಿ ಏನಾದ್ರೂ ರಾಜ್ಯ ರಾಜಕಾರಣದಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆಗಳಾದ್ರೆ, ತಮಗೂ ಅವಕಾಶ ಹುಡುಕಿಕೊಂಡು ಬರಬಹುದು. ಅದನ್ನು ಬಿಟ್ಟು ಈಗ ರಾಷ್ಟ್ರ ರಾಜಕಾರಣಕ್ಕೆ ಹೋಗಿದ್ದೇ ಆದ್ರೆ, ಪ್ರಾಂತ್ಯ ಆಧಾರದಲ್ಲಿ ಯಾವುದೇ ಸಚಿವ ಸ್ಥಾನ ಸಿಗದೇ ಕೇವಲ ಸಂಸದನಾಗಿ ಕಾರ್ಯನಿರ್ವಹಣೆ ಮಾಡಬೇಕಾಗಬಹುದು.
ಇಂತಹ ಪರಿಸ್ಥಿತಿಗಿಂತ, ಹಾಲಿ ಶಾಸಕನಾಗಿಯೇ ಮುಂದುವರೆಯುವುದು ಸೂಕ್ತ ಎಂಬ ಲೆಕ್ಕಾಚಾರವನ್ನು ಬಸವರಾಜ ಬೊಮ್ಮಾಯಿ ಹಾಕುತ್ತಿದ್ದಾರೆ ಎನ್ನಲಾಗಿದೆ.ಆದರೆ, ಹೈಕಮಾಂಡ್ ನಾಯಕರು ಮಾತ್ರ ಬಸವರಾಜ ಬೊಮ್ಮಾಯಿಗೆ ಹಾವೇರಿ-ಗದಗ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಸೂಚನೆ ಕೊಡುತ್ತಿರುವ ಕಾರಣ. ಅಡಕತ್ತರಿಯಲ್ಲಿ ಬಸವರಾಜ ಬೊಮ್ಮಾಯಿ ಸಿಲುಕಿದ್ರಾ? ಎಂಬ ಪ್ರಶ್ನೆ ಎದುರಾಗಿದೆ.