ನೆಲಮಂಗಲ: “ಹಿಮಾಲಯದ ತಪ್ಪಲಿನಿಂದ ಲಕ್ಷದ್ವೀಪದ ಸಮುದ್ರದ ವರೆಗೆ, ಗುಜರಾತಿನ ಬಯಲು ಸೀಮೆಯಿಂದ ಈಶಾನ್ಯ ರಾಜ್ಯಗಳ ದಟ್ಟ ಅರಣ್ಯದವರೆಗೆ ಹರಡಿಕೊಂಡಿರುವ 705 ಬುಡಕಟ್ಟು ಜನಾಂಗಗಳಲ್ಲಿ ಒಂದಾದ ಕಾಡುಗೊಲ್ಲ ಜನಾಂಗದ ತಳ ಸಂಸ್ಕೃತಿ ಸಂಪ್ರದಾಯಗಳು ನಾಡಿನ ಹೆಮ್ಮೆಯಾಗಿವೆ. ಇವನ್ನು ಇಂದಿಗೂ ಪಾಲಿಸಿಕೊಂಡು, ಉಳಿಸಿಕೊಂಡು, ಬೆಳೆಸಿಕೊಂಡು ಬಂದಿರುವ ನಿಮಗೆಲ್ಲರಿಗೂ ಶಿರಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತೇನೆ.
ಸಾವಿರಾರು ವರ್ಷಗಳಿಂದ, ತಲೆ ತಲೆಮಾರುಗಳಿಂದ ಬಳುವಳಿಯಾಗಿ ಬಂದಿರುವ ಇವುಗಳನ್ನು ಮುಂದಿನ ತಲೆಮಾರಿಗೂ ತಲುಪಿಸಿ ಶಾಶ್ವತವಾಗಿ ಉಳಿಯುವಂತೆ ಮಾಡಿರಿ. ಇಂತಹ ಅತ್ಯುತ್ತಮ ಕಾರ್ಯಕ್ರಮವನ್ನು ಆಯೋಜಿಸಿದ ಮಂಜುನಾಥ್ ಅವರಿಗೆ ಅಭಿನಂದನೆಗಳು” ಎಂದು ಲೇಖಕ ಚಿಂತಕ ಮಣ್ಣೆ ಮೋಹನ್ ರವರು ತಿಳಿಸಿದರು. ಅವರು ತಾಲೂಕು ಕಸಾಪ ವತಿಯಿಂದ ಸೋಂಪುರ ಹೋಬಳಿ, ಕೆಂಗಲ್ ಗೊಲ್ಲರಹಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ “ಹಳ್ಳಿಯಿಂದ ಹಳ್ಳಿಗೆ ಸಾಹಿತ್ಯ ಸಾಂಸ್ಕೃತಿಕ ಸಂಚಾರ” ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ತಾಲ್ಲೂಕು ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ “ನಾಲ್ವಡಿ ಕೃಷ್ಣರಾಜ ಒಡೆಯರ್ ರವರಿಂದ ಕನ್ನಡ ಸಾಹಿತ್ಯ ಪರಿಷತ್ತು ಉದಯವಾಯಿತು.1988 ರಲ್ಲಿ ನೆಲಮಂಗಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹುಟ್ಟಿಕೊಂಡಿತು.ಅನೇಕ ಮಹನೀಯರು ಅದನ್ನು ಕಟ್ಟಿ ಬೆಳೆಸಿದ್ದಾರೆ. ಇದೀಗ ಕಸಾಪವನ್ನು ಹಳ್ಳಿ ಹಳ್ಳಿಗೆ ಕೊಂಡಯ್ಯಬೇಕೆಂಬ ಆಲೋಚನೆಯಿಂದ, ಗುರುಗಳಾದ ಮಣ್ಣೆ ಮೋಹನ್ ರವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ” ಎಂದರು.
ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿ ಬಿ ಪ್ರಕಾಶ್ ಮೂರ್ತಿ ಸ್ವಾಗತ ಕೋರಿದರು. ಕವಿ ಚಿಂತಕ ಸದಾನಂದಾರಾಧ್ಯರವರು ಮಾತನಾಡಿ, ತಳಮೂಲ ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿರುವ ಹಳ್ಳಿಯ ವಿಶೇಷತೆಗಳ ಬಗ್ಗೆ ಗಮನ ಸೆಳೆದರು. ವಕೀಲರಾದ ಕನಕರಾಜು ಮಾತನಾಡಿ, ಮುಂದಿನ ದಿನಗಳಲ್ಲಿ ಬೆಳಕು ಸಂಸ್ಥೆಯಿಂದ ಈ ಗ್ರಾಮದಲ್ಲಿ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಹಳ್ಳಿಯ ಅಪ್ಪಟ ಪ್ರತಿಭೆ ಮಂಜುನಾಥ್ ಬುಡಕಟ್ಟು ಸಂಸ್ಕೃತಿ ಸಾಂಪ್ರದಾಯ ಮತ್ತು ಸಾಹಿತ್ಯದ ಪರಿಚಯ ಮಾಡಿಕೊಟ್ಟರು.ಯುವಕವಿ ಜಯರಾಮ್ ಜನಪದ ಸಾಹಿತ್ಯದ ಬಗ್ಗೆ ಮಾತನಾಡಿದರು. ಸಮಾಜ ಸೇವಕ ಆನಂದ್ ಹಳ್ಳಿಯ ಸಾಂಸ್ಕೃತಿಕ ವೈಶಿಷ್ಟವನ್ನು ಕೊಂಡಾಡಿದರು.ಕಾರ್ಯಕ್ರಮಕ್ಕೆ ಮೊದಲು ಗ್ರಾಮದ ಭೂತಪ್ಪ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು. ಊರಿನ ಸಂಪ್ರದಾಯದಂತೆ ಕರೆ ಕಂಬಳಿ ಮತ್ತು ಗಣೆ( ಕೊಳಲಿನ ವಿಸ್ಕೃತ ರೂಪ) ಪೂಜೆ ನೆರವೇರಿಸಲಾಯಿತು.
“ಸಕಲ ಗುಣ ಸಂಪನ್ನರಾದ, ಗೋಕುಲ ಚಿಂತಾಮಣಿಗಳಾದ, ಯದುಕುಲ ವಂಶಸ್ಥರಾದ, ಶ್ರೀ ಕೃಷ್ಣ ಪಾದಸೇವಕರಾದ ಅಂಚಿನದಟ್ಟಿ, ಕಂಚಿನ ಖಡ್ಗ, ನಾರವಲ್ಲಿ, ಚಿಪ್ಪು ಕೊಡಲಿ, ಚಿನ್ನದ ಬಿದಿರಿನ ಕೋಲು, ಕರೆ ಕಂಬಳಿ ಸಿಂಹಾಸನ ರೂಢರಾದ, ರೇಪಲ್ಲಿ, ಮಾಪಲ್ಲಿ ,ಕನಕ ಪಲ್ಲಿ ಇನ್ನು ಮುಂತಾದ ನೂರೊಂದು ಬಿರಿದಾ0ಕಿತಾರಾದ ಮೂರು ಕಟ್ಟೆ ಮುನ್ನೂರು ಕುಲಸ್ವಾಮಿಗಳು ಸ್ವಾಮಿ ಕಾರ್ಯಕ್ಕೆ ಅಪ್ಪಣೆ ಕೊಡಬೇಕು ಸ್ವಾಮಿ” ಎಂಬ ಅಪ್ಪಣೆಯೊಂದಿಗೆ ಬೀಸುವ ಕಲ್ಲಿನಲ್ಲಿ ಅಕ್ಕಿ ಬೀಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ನಂದನ್ ಕುಮಾರ್ ಜುಂಜಪ್ಪ ಸ್ವಾಮಿಯ ಪ್ರಾರ್ಥನೆಯನ್ನು ಹಾಡುವುದರ ಮೂಲಕ ಚಾಲನೆ ನೀಡಿದರು.ತಾಯಮ್ಮ ಮತ್ತು ತಂಡದವರು ಸೋಬಾನ ಮತ್ತು ಗಣೆ ಪದಗಳನ್ನು, ಮಾನಯ್ಯ ಮತ್ತು ತಂಡದವರು ಕೋಲಾಟ ಪದಗಳನ್ನು ಹಾಡಿದರು. ಶಾಲಾ ಮಕ್ಕಳ ಅದ್ಭುತ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೇದಿಕೆ ಸಾಕ್ಷಿಯಾಯಿತು. ಗ್ರಾಮಸ್ಥರ ಕೋಲಾಟದ ಸದ್ದು ಹಳ್ಳಿಯ ತುಂಬಾ ಮಾರ್ದನಿಸಿತು.
ಗ್ರಾಮದ ಮುಖಂಡರಾದ ತಿಮ್ಮಪ್ಪ, ಚಿಕ್ಕ ಮಾಳಯ್ಯ, ಗಂಗಣ್ಣ, ಚಿಕ್ಕೇಗೌಡ, ಕರೇಗೌಡ, ಅಜ್ಜೇಗೌಡನ ಈರಣ್ಣ, ರಾಘವೇಂದ್ರ ಮಲ್ಲೇನಹಳ್ಳಿ, ಚಂದ್ರು , ಅಭಿಷೇಕ್, ಕಾಂತರಾಜು, ಗಿರೀಶ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಪ್ರತಿ ಹಳ್ಳಿಯಲ್ಲಿರುವ ಸಂಸ್ಕೃತಿ, ಸಂಪ್ರದಾಯಗಳನ್ನು ಗುರುತಿಸಿ ಪ್ರೊತ್ಸಾಹಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಈ ಕಾರ್ಯ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಇಡೀ ನಾಡಿನಾದ್ಯಂತ ಇಂತಹ ಕಾರ್ಯಕ್ರಮಗಳ ಪ್ರಸ್ತುತತೆ ಅವಶ್ಯಕವಾಗಿದೆ.
ವರದಿ: ಮಣ್ಣೆ ಮೋಹನ್