ಚಾಂಪಿಯನ್ಸ್ ಲೀಗ್ ಟಿ20 (CLT20) ಟೂರ್ನಿಯನ್ನು ಮತ್ತೆ ಆಯೋಜಿಸಲು ಬಿಸಿಸಿಐ ತೆರೆಮರೆಯ ಪ್ರಯತ್ನಕ್ಕೆ ಕೈ ಹಾಕಿದೆ. ವಿಶ್ವದ ಪ್ರಮುಖ ಲೀಗ್ಗಳಲ್ಲಿನ ಚಾಂಪಿಯನ್ಸ್ ತಂಡಗಳ ನಡುವಣ ಟೂರ್ನಿಯನ್ನು 2014 ರಲ್ಲಿ ಕೊನೆಯ ಬಾರಿ ಆಯೋಜಿಸಲಾಗಿತ್ತು.
ಇದಾದ ಬಳಿಕ ವಿಶ್ವದ ಚಾಂಪಿಯನ್ಸ್ ತಂಡಗಳನ್ನು ಮತ್ತೆ ಒಂದುಗೂಡಿಸಲು ಬಿಸಿಸಿಐಗೆ ಸಾಧ್ಯವಾಗಿರಲಿಲ್ಲ.ಇದೀಗ 10 ವರ್ಷಗಳ ಬಳಿಕ ಮತ್ತೊಮ್ಮೆ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿ ಆಯೋಜಿಸಲು ಬಿಸಿಸಿಐ ಮುಂದಾಗಿದೆ.
ಈ ಬಗ್ಗೆ ಈಗಾಗಲೇ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಮತ್ತು ಇಸಿಬಿ (ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ) ಜೊತೆ ಬಿಸಿಸಿಐ ಚರ್ಚೆ ನಡೆಸಿದೆ. ಈ ಮಾತುಕತೆ ಯಶಸ್ವಿಯಾದರೆ ಇದೇ ವರ್ಷ ಚಾಂಪಿಯನ್ಸ್ ಲೀಗ್ ಟೂರ್ನಿ ಆಯೋಜನೆಗೊಳ್ಳುವ ಸಾಧ್ಯತೆಯಿದೆ. ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯಲ್ಲಿ ವಿಶ್ವದ ಪ್ರಮುಖ ಲೀಗ್ನಲ್ಲಿನ ತಂಡಗಳು ಕಣಕ್ಕಿಳಿಯಲಿದೆ.