ಹನೂರು: ಬಿಜೆಪಿ ಸರ್ಕಾರ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಸ್ಕಾಲರ್ ಶಿಪ್ ನಿಲ್ಲಿಸಿರುವುದರಿಂದ ಬಡ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ತೊಂದರೆ ಆಗಿದೆ ಎಂದು ಶಾಸಕ ನರೇಂದ್ರ ತಿಳಿಸಿದರು.
ತಾಲೂಕಿನ ಮರೂರು, ಪೊನ್ನಾಚಿ, ಅಸ್ತೂರು ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ದುಡಿಯುವ ವರ್ಗದವರಿಗೆ ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೆ ತಂದು ಕಡಿಮೆ ಬೆಲೆಯಲ್ಲಿ ತಿಂಡಿ, ಊಟ ನೀಡಲಾಗುತ್ತಿತ್ತು. ಈ ಯೋಜನೆಯಿಂದ ಕಾಂಗ್ರೆಸ್ ನವರಿಗೆ ಅನುಕೂಲವಾಗುತ್ತದೆ ಎಂಬ ದುರುದ್ದೇಶದಿಂದ ಇಂದಿರಾ ಕ್ಯಾಂಟೀನ್ ನಿಲ್ಲಿಸುತ್ತಿದ್ದಾರೆ.
ಇದರಿಂದ ಆಟೋ ಚಾಲಕರು ಕಟ್ಟಡ ಕಾರ್ಮಿಕರು ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದ ಬಡವರಿಗೆ ತೊಂದರೆಯಾಗಿದೆ. ಇದಲ್ಲದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಹಲವು ಯೋಜನೆಗಳನ್ನು ತಡೆಹಿಡಿದಿದ್ದಾರೆ. ಪಕ್ಷದ ವತಿಯಿಂದ ಈಗಾಗಲೇ ಪ್ರತಿ ಮನೆಮನೆಗೂ ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್, ಒಬ್ಬರಿಗೆ 10 ಕೆಜಿ ಪಡಿತರ ಅಕ್ಕಿ, ಮನೆಯ ಯಜಮಾನಿಗೆ ಎರಡು ಸಾವಿರ, ಡಿಗ್ರಿ ಪಾಸಾದ ವಿದ್ಯಾರ್ಥಿಗಳಿಗೆ 3ಸಾವಿರ ಡಿಪ್ಲೋಮೋ ಪಾಸಾದ ವಿದ್ಯಾರ್ಥಿಗಳಿಗೆ 1.5 ಸಾವಿರ ಸಹಾಯಧನ ನೀಡಲಾಗುತ್ತದೆ ಈ ಯೋಜನೆಗಳೆಲ್ಲ ಅನುಷ್ಠಾನಕ್ಕೆ ಬರಬೇಕಾದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ನನಗೆ ಶಕ್ತಿ ನೀಡಬೇಕು ಎಂದು ಮನವಿ ಮಾಡಿದರು.
ಶಾಸಕ ಮನವಿ : ಈ ಬಾರಿ ಚುನಾವಣಾ ಆಯೋಗ ಯಾರೊಬ್ಬರೂ ಮತದಾನದಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ 80 ವರ್ಷ ಮೇಲ್ಪಟ್ಟ ವೃದ್ಧರಿಗೆ ಅಂಚೆ ಮತದಾನ ಮಾಡಲು ಅವಕಾಶ ಮಾಡಿಕೊಟ್ಟಿದೆ. ಆದ್ದರಿಂದ ಪ್ರತಿಯೊಬ್ಬರೂ ಮತದಾನದಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಹಕ್ಕನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕ ಆರ್ ನರೇಂದ್ರ ಮನವಿ ಮಾಡಿದರು.
ರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಮಾತನಾಡಿ ಕಳೆದ ತಿಂಗಳು ಹನೂರು ಕ್ಷೇತ್ರಕ್ಕೆ ಮೂರು ಬಾರಿ ಬಂದಿದ್ದ ಸಿಎಂ ಬೊಮ್ಮಾಯಿ ರವರು ವಿಶೇಷ ಪ್ಯಾಕೇಜ್ ನೀಡುತ್ತೇವೆ ಎಂದು ಜನರಿಗೆ ಕಿವಿ ಮೇಲೆ ಹೂವು ಇಟ್ಟಿದ್ದಾರೆ. ಮೊದಲ ಬಾರಿ ಹನೂರು ಕ್ಷೇತ್ರಕ್ಕೆ ಬಂದಾಗ ಹನೂರು ಪಟ್ಟಣದಲ್ಲಿ 100 ಹಾಸಿಗೆಗಳ ಆಸ್ಪತ್ರೆ, ಹನೂರು ಪಟ್ಟಣದಿಂದ ಮಲೆ ಮಾದೇಶ್ವರ ಬೆಟ್ಟದ ವರೆಗೆ ರಸ್ತೆ ಅಭಿವೃದ್ಧಿ, ಉಡುತೊರೆ ಜಲಾಶಯಕ್ಕೆ ನೀರು ತುಂಬಿಸುವ ಯೋಜನೆಗೆ ಅನುದಾನ ನೀಡುತ್ತೇವೆ ಎಂದು ಭರವಸೆ ನೀಡಿದ್ದರು.
ಇದಕ್ಕೆ ಬಜೆಟ್ ನಲ್ಲಿ ಹಣ ನೀಡಲಿಲ್ಲ, ಎರಡನೇ ಬಾರಿ ಜನ ಸಂಕಲ್ಪ ಯಾತ್ರೆಗೆ ಆಗಮಿಸಿದ್ದ ವೇಳೆ ಒಂದು ವಾರದಲ್ಲಿ ಹನೂರು ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ನೀಡುತ್ತೇನೆ ಎಂದರು. ಇದನ್ನು ಸಹ ನೀಡಲಿಲ್ಲ, ಮೂರನೇ ಬಾರಿ ಪ್ರತಿಮೆ ಉದ್ಘಾಟನೆಗೆ ಬಂದ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲೆಗೆ ಪ್ಯಾಕೇಜ್ ಘೋಷಣೆ ಮಾಡುವುದಾಗಿ ತಿಳಿಸಿದ ಸಿಎಂ ಬೊಮ್ಮಾಯಿ ರವರು ಕೊಟ್ಟಿರುವ ಯಾವುದೇ ಭರವಸೆಯನ್ನು ಈಡೇರಿಸಿಲ್ಲ ಜನರು ಬಿಜೆಪಿ ಪಕ್ಷದ ಸುಳ್ಳು ಭರವಸೆಗೆ ಮರುಳಾಗಬಾರದು. ಕಳೆದ ಬಾರಿ ಸಿದ್ದರಾಮಯ್ಯನವರು ನೀಡಿದ 165 ವರ್ಷಗಳಲ್ಲಿ 150ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸಿದ್ದಾರೆ ನಮ್ಮದು ನುಡಿದಂತೆ ನಡೆದ ಸರ್ಕಾರ ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹನೂರು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ್ ದೊರೆರಾಜ್, ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಾದೇಶ್,ಪೊನ್ನಾಚಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಚಂದ್ರ, ಮುಖಂಡರಾದ ಶಿವರಾಮು, ಉದ್ಯಮಿ ರಂಗಸ್ವಾಮಿ, ಎಲ್ ನಾಗೇಂದ್ರ ಸೇರಿದಂತೆ ಇನ್ನಿತರರು ಹಾಜರಿದ್ದರು.
Leave a Review