ಚಾಮರಾಜನಗರ: ಬಿರ್ಸಾಮುಂಡಾ ಜಯಂತಿ ಪ್ರಯುಕ್ತ ಜಿಲ್ಲೆಯ ವಿವಿಧೆಡೆ ವೈವಿಧ್ಯಮಯ ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಚಾಮರಾಜನಗರ ತಾಲ್ಲೂಕಿನ ರಂಗಸಂದ್ರ ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯಲ್ಲಿ ಇತ್ತೀಚೆಗೆ ಭಗವನ್ ಶ್ರೀ ಬಿರ್ಸಾಮುಂಡಾ ಜಯಂತಿ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಬಿರ್ಸಾಮುಂಡಾ ಮತ್ತು ಹಲಗಲಿ ಬೇಡರ ಬಗ್ಗೆ ವೀಡಿಯೋ ಪ್ರದರ್ಶಿಸಲಾಯಿತು. ಬುಡಕಟ್ಟು ಸಂಸ್ಕೃತಿಗೆ ಸಂಬಂಧಿಸಿದಂತೆ ಚಿತ್ರಕಲಾ ಸ್ಪರ್ಧೆ, ಬಿರ್ಸಾಮುಂಡಾ ರವರ ಜೀವನ ಚರಿತ್ರೆಯ ಬಗ್ಗೆ ಮಕ್ಕಳಿಂದ ಕಥೆ ಹೇಳಿಸಲಾಯಿತು. ನೃತ್ಯ, ಸಂಗೀತ, ನಾಟಕ ಪ್ರದರ್ಶನ, ಮಣ್ಣಿನಲ್ಲಿ ವಿಭಿನ್ನ ಮಾದರಿಗಳನ್ನು ತಯಾರಿಸಲಾಯಿತು.
ಪಿಎಂ-ಜನ್ಮನ್, ಎನ್.ಇ.ಪಿ ಶಿಕ್ಷಣ ನೀತಿ, ಕಾನೂನು ಸಬಲೀಕರಣ ಮತ್ತು ೫ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗೆ ಸೇರಿಸಬಹುದಾದ ಶಾಲೆಗಳು ಮತ್ತು ೧೦ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಕೋರ್ಸ್ಗಳ ಬಗ್ಗೆ ಮುಖೋಪಾಧ್ಯಯರು ಮಾಹಿತಿ ನೀಡಿದರು.ಬುಡಕಟ್ಟು ನಾಯಕರ ಮತ್ತು ಅವರ ಸಾಧನೆಗಳ ಬಗ್ಗೆ ರಂಗಸಂದ್ರ ಗ್ರಾಮದ ಸ್ಥಳೀಯರಾದ ಜಡೇಗೌಡ ಅವರಿಂದ ಮಕ್ಕಳಿಗೆ ಅರಿವು ಮೂಡಿಸಲಾಯಿತು. ವಿದ್ಯಾರ್ಥಿಗಳಿಗೆ ನಮ್ಮ ಶಾಲೆ ವಿಷಯ ಕುರಿತು ಪ್ರಬಂಧ ಸ್ಪರ್ಧೆ, ಕಪ್ಪೆ ಓಟ, ಗೋಣಿಚೀಲದ ಓಟ, ಲೆಮನ್ ಇನ್ ದಿ ಸ್ಪೂನ್, ಮ್ಯೂಸಿಕಲ್ ಚೇರ್, ಕಬ್ಬಡ್ಡಿ, ವಾಲಿಬಾಲ್, ಚೆಸ್ ಸೇರಿದಂತೆ ಇತರೆ ಕ್ರೀಡಾ ಸ್ಪರ್ಧೆಗಳನ್ನು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ನಡೆಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ವಸತಿ ಶಾಲೆಯ ಮುಖ್ಯಶಿಕ್ಷಕರಾದ ಸಿ. ಕುಮಾರಸ್ವಾಮಿ ಅವರು ನೆರವೇರಿಸಿದರು. ಕೊಳ್ಳೇಗಾಲ ತಾಲ್ಲೂಕಿನ ೧೦ ಆಶ್ರಮ ಶಾಲೆಗಳಲ್ಲಿ ಬುಧವಾರ ಭಗವಾನ್ ಶ್ರೀ ಬಿರ್ಸಾಮುಂಡಾ ಜಯಂತಿ ಅಂಗವಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ತಾಲೂಕಿನ ರಾಚಪ್ಪಾಜಿ ನಗರ ಗ್ರಾಮದಲ್ಲಿ ನಡೆದ ಆರೋಗ್ಯ ತಪಾಸಣಾ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ವೈಯಕ್ತಿಕ ಸ್ವಚ್ಚತೆ, ನೈರ್ಮಲ್ಯ, ಪೌಷ್ಠಿಕ ಆಹಾರದ ಬಗ್ಗೆ ಅರಿವು ಮೂಡಿಸಲಾಯಿತು. ಶಾಲಾ ಶಿಕ್ಷಕರಾದ ಚಂದ್ರಮ್ಮ, ರವೀಂದ್ರ, ಪ್ರಸನ್ನ ಮೂರ್ತಿ, ಇತರರು ಹಾಜರಿದ್ದರು.



