ಭೈರ್ಯ ಕೆಎ-07 ಸಿನಿಮಾದಲ್ಲಿ ಗೌರಿಬಿದನೂರಿನ ರೋಷನ್ ಕಥೆ,ಚಿತ್ರಕಥೆ ಬರೆದು ಮೊದಲ ಬಾರಿ ನಾಯಕನಾಗಿ ನಟಿಸುತ್ತಿದ್ದಾರೆ. ರಾಜೀವ್ಚಂದ್ರಕಾಂತ್ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕನ್ನಡ ಪ್ರೇಮಿ ಬಾಗಲಕೋಟೆಯ ಷರೀಫ ಬೇಗಂ ನಡಾಫ್, ಎನ್ಜಿಓ ಸಂಘ ನಡೆಸುತ್ತಿದ್ದು, ಸಾಧನೆ ಮಾಡುವ ಸಲುವಾಗಿ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ.
ಚಿತ್ರದ ಮಹತ್ವದ ಸನ್ನಿವೇಶದ ಸಲುವಾಗಿ ಹೊಸಮನೆ ಮೂರ್ತಿ ಸಾರಥ್ಯದಲ್ಲಿ ಹೆಚ್ಎಂಟಿಯಲ್ಲಿ ಸೆಟ್ ಹಾಕಲಾಗುತ್ತಿದೆ. ಇದರಲ್ಲಿ ಹಿರಿಯ ಕಲಾವಿದರುಗಳು ಭಾಗವಹಿಸಲಿರುವರು. ಇದರನ್ವಯ ಚಿತ್ರೀಕರಣಕ್ಕೆ ಹೋಗುವ ಮುನ್ನ ಧರ್ನುಮಾಸದ ಮೊದಲನೆ ಶುಭ ದಿನದಂದು ಗ್ರಾಮದೇವತೆ ಶ್ರೀ ಮುತ್ಯಾಲಮ್ಮನ ದೇವಸ್ಥಾನದಲ್ಲಿ ತಂಡವು ಸರಳವಾಗಿ ಪೂಜೆ ಆಚರಿಸಿಕೊಂಡಿದೆ.
ನಟ,ನಿರ್ದೇಶಕ ಗಡ್ಡವಿಜಿ ಆಗಮಿಸಿ ತಂಡಕ್ಕೆ ಶುಭ ಹಾರೈಸಿದ್ದಾರೆ. ಇನ್ನು ರೋಷನ್ರವರ ಕುರಿತು ಹೇಳುವುದಾದರೆ, ಇವರು ಭರತನಾಟ್ಯ ಪ್ರವೀಣ, ಮುಂಬೈನಲ್ಲಿ ನಟನೆ ತರಭೇತಿ ಪಡೆದುಕೊಂಡು ಬಂದಿದ್ದಾರೆ. ಮುಂದೆ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಯಾಗಿ, ಸ್ಕ್ರಿಪ್ಟ್ ಬರೆದುಕೊಂಡು ಹಲವು ಚಿತ್ರಗಳಿಗೆ ಸೆಟ್ ಕೆಲಸ ನಿರ್ವಹಿಸಿ, ಮಧ್ಯೆ ತಲ್ವಾರ್ ಕಿರುಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದೆಲ್ಲಾ ಅನುಭವದಿಂದ ಈಗ ಹೊಸ ಅನುಭವ ಎನ್ನುವಂತೆ ಹೀರೋ ಆಗಿ ಪರಿಚಯವಾಗುತ್ತಿದ್ದಾರೆ.
ಭೂಗತ ಲೋಕದ ಕಥೆಯಲ್ಲಿ ನಾಯಕನ ಹೆಸರು ಶೀರ್ಷಿಕೆಯಾಗಿರುತ್ತದೆ. ಬೆಂಗಳೂರಿನ ಡಾನ್ಗಳ ಕುರಿತಂತೆ ಸಾಕಷ್ಟು ಸಿನಿಮಾಗಳು ಬಂದಿವೆ. ಆದರೆ ಚಿಕ್ಕಬಳ್ಳಾಪುರ, ಕೋಲಾರ, ಕೆಜಿಎಫ್, ಚಿಂತಾಮಣಿ, ಶಿಡ್ಲಘಟ್ಟವನ್ನು ಜನರು ಮರೆತು ಹೋಗಿದ್ದಾರೆ. ಕೆಜಿಎಫ್ದಲ್ಲಿರುವ ಚಿನ್ನದ ಗಣಿಯನ್ನು ರಕ್ಷಣೆ ಮಾಡಿದವರು ಯಾರು ಅಂದು ಅಧ್ಯಕ್ಷರಾಗಿದ್ದವರು ಯಾರು ಇವತ್ತಿನವರೆಗೂ ಅದು ಯಾಕೆ ಸರ್ಕಾರದ ಅಧೀನದಲ್ಲಿಲ್ಲ ಇಂತಹ ಎಲ್ಲಾ ರೀತಿಯ ಅಂಶಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಇನ್ನುಳಿದಂತೆ ನಾಯಕಿ, ಹಿರಿಯ ಪೋಷಕ ಕಲಾವಿದರು, ಹೆಸರಾಂತ ತಂತ್ರಜ್ಘರು ಚಿತ್ರದಲ್ಲಿ ಇದ್ದಾರೆ. ಇವೆಲ್ಲಾ ಮಾಹಿತಿಗಳನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ನಿರ್ದೇಶಕರು ಹೇಳಿದ್ದಾರೆ.