ಆನೇಕಲ್: ತಾಲ್ಲೂಕಿನ ಯಲಚೇನಹಳ್ಳಿಯಲ್ಲಿ ಬಿಎಸ್ಪಿಯಿಂದ ನಡೆದ ಭೀಮಾ ಕೋರೆಗಾಂವ್ ವಿಜಯೋತ್ಸವದಲ್ಲಿ ಬಿಎಸ್ಪಿ ರಾಜ್ಯ ಉಸ್ತುವಾರಿ ಎಂ.ಗೋಪಿನಾಥ್ ರಚಿಸಿರುವ ಭೀಮಾ ಕೋರೆಗಾಂವ್ ದಲಿತ ವಿಜಯೋತ್ಸವ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಬಿಎಸ್ಪಿ ಪಕ್ಷದ ರಾಜ್ಯ ಖಜಾಂಚಿ ಡಾ. ಚಿನ್ನಪ್ಪ ವೈ ಚಿಕ್ಕಹಾಗಡೆ ಮಾತನಾಡಿ, ದಲಿತರು ಸಂಘಟಿತರಾದಾಗ ಮಾತ್ರ ನಮ್ಮ ಹಕ್ಕುಗಳು ಪಡೆಯಲು ಸಾಧ್ಯವಾಗುತ್ತದೆ.
ಈ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ತತ್ವ ಸಿದ್ಧಾಂತ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಉನ್ನತ ಸಾಧನೆ ಮಾಡಬಹುದಾಗಿದೆ ಎಂದರು.ಶೋಷಣೆಯ ವಿರುದ್ಧ ಹೋರಾಟ ಮತ್ತು ಸ್ವಾಭಿಮಾನವನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಕೋರೆಗಾಂವ್ ವಿಜಯೋತ್ಸವ ಅರ್ಥಪೂರ್ಣವಾಗಿದೆ. ಈ ವಿಜಯೋತ್ಸವ ಒಂದು ದಿನಕ್ಕೆ ಸೀಮಿತವಾಗದೇ ಪ್ರತಿಯೊಬ್ಬರ ಸ್ವಾಭಿಮಾನದ ಸಂಕೇತವಾಗಬೇಕು ಎಂದರು.
ಬಿಎಸ್ಪಿ ರಾಜ್ಯ ಉಸ್ತುವಾರಿ ಎಂ.ಗೋಪಿನಾಥ್ ಮಾತನಾಡಿ, ಭೀಮಾ ಕೋರೆಗಾಂವ್ ವಿಜಯೋತ್ಸವವು ಸ್ವಾಭಿಮಾನಿಗಳ ಹೋರಾಟದ ಗೆಲುವಾಗಿದೆ. ಸಮ ಸಮಾಜದ ನಿರ್ಮಾಣಕ್ಕೆ ಶಿಕ್ಷಣ ಪ್ರಮುಖ ಅಸ್ತ್ರವಾಗಿದೆ. ಹಾಗಾಗಿ ಶಿಕ್ಷಣ ಪಡೆಯುವ ಮೂಲಕ ಶೋಷಣೆಯ ವಿರುದ್ಧ ದನಿ ಎತ್ತಬೇಕು ಎಂದರು.
ಬಿಎಸ್ಪಿ ಪಕ್ಷರ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಮುನಿಯಪ್ಪ, ಜಿಲ್ಲಾಧ್ಯಕ್ಷ ಸಿ.ಎಲ್.ಮುನಿಯಲ್ಲಪ್ಪ, ಮುಖಂಡರಾದ ಗೌರಿಶಂಕರ್, ವಸಂತ್, ಮಿಥುನ್ರೆಡ್ಡಿ, ಲೋಕೇಶ್, ಶಿವಕುಮಾರ್, ಟಿ.ಎಸ್.ಕುಮಾರಾಚಾರಿ, ಕಿರಣ್, ಕೃಷ್ಣಮೂರ್ತಿ, ರೂಪಣ್ಣ, ಶ್ರೀನಿವಾಸಾಚಾರ್ ಇದ್ದರು.