ಯಲಹಂಕ: ಮಂಡ್ಯ ಭಾಗದಲ್ಲಿ ನಡೆಯುತ್ತಿದ್ದ ಗ್ರಾಮೀಣ ನಾಟಿ ಕೋಳಿ ಸಾರು, ಮುದ್ದೆ ಊಟದ ಸ್ಪರ್ಧೆ ಬೆಂಗಳೂರಿನ ಯಲಹಂಕ ಕ್ಷೇತ್ರಕ್ಕೂ ಕಾಲಿಟ್ಟಿದ್ದು ಕಿತ್ತನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ. ಡಿ. ರವಿಕುಮಾರ್ ರವರ ಪರಿಶ್ರಮದಿಂದ ಯಶಸ್ವಿಯಾಗಿ ನಡೆಯಿತು.
ಬೆಂಗಳೂರು ಉತ್ತರ ತಾಲ್ಲೂಕು ದಾಸನಪುರ ಹೋಬಳಿ ವ್ಯಾಪ್ತಿಯ ಕಿತ್ತನಹಳ್ಳಿ, ಸೊಂಡೆಕೊಪ್ಪ,ಕಡಬಗೆರೆ,ಮಾಚೋಹಳ್ಳಿ, ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಒಳಪಡುವ ಗ್ರಾಮಸ್ಥರಿಗಾಗಿ ಅವ್ವೆರಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮೀಣ ನಾಟಿ ಕೋಳಿ ಸಾರು ಮುದ್ದೆ ಊಟದ ಸ್ಪರ್ಧೆಯಲ್ಲಿ 17 ಸ್ಪರ್ಧಿಗಳು ಭಾಗವಹಿಸಿದ್ದು 30 ನಿಮಿಷ ಕಾಲಾವಕಾಶದಲ್ಲಿ ಬರೋಬ್ಬರಿ 300 ಗ್ರಾಂ ತೂಕದ 9 ಮುದ್ದೆಗಳನ್ನು ತಿಂದ ಕಿತ್ತನಹಳ್ಳಿ ಗ್ರಾಮದ ದುಗ್ಗಲಯ್ಯ ಮೊದಲ ಬಹುಮಾನವಾಗಿ ಕುರಿ ಟಗರನ್ನು ಪಡೆದರು.
ದ್ವಿತೀಯ ಬಹುಮಾನ ಕ್ಕೆ ತಲಾ 8 ಮುದ್ದೇಗಳನ್ನು ತಿಂದು ಸಮಬಲದ ಹೋರಾಟ ನೀಡಿದ ನಾರಾಯಣಪ್ಪ ಮತ್ತು ಹನುಮಂತಯ್ಯ ಬಾಜನರಾದರೆ ತೃತೀಯ ಬಹುಮಾನ ಲಕ್ಕೆನಹಳ್ಳಿ ಉಮೇಶ್ ಪಾಲಾಯಿತು . ಇಬ್ಬರು ಮಹಿಳೆಯರು ಸಹ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು ಒಟ್ಟಾರೆ ಹಳ್ಳಿ ಸೊಗಡಿನ ಗ್ರಾಮೀಣ ಆಟವನ್ನು ಕಣ್ತುಂಬಿಕೊಂಡ ಗ್ರಾಮಸ್ಥರು ಸಂತಸ ಗೊಂಡರು.
ಬಳಿಕ ಮಾತನಾಡಿದ ಆಯೋಜಕರಾದ ಡಿ ರವಿಕುಮಾರ್ ಪ್ರಾಯೋಗಿಕವಾಗಿ ನಾಲ್ಕು ಪಂಚಾಯತಿಗಳ ವ್ಯಾಪ್ತಿಯಲ್ಲಿ ಈ ಆಟವನ್ನು ಆಯೋಜಿಸಿದ್ದ ಈ ಆಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಮುಂದಿನ ದಿನಗಳಲ್ಲಿ ಯಲಹಂಕ ಕ್ಷೇತ್ರದ ಮಟ್ಟದಲ್ಲಿ ಶಾಸಕರದ ಎಸ್ಆರ್ ವಿಶ್ವನಾಥ್ ಸಾರಥ್ಯದಲ್ಲಿ ನಡೆಸಲಾಗುವುದು ಆಟದಲ್ಲಿ ಭಾಗಿಯಾದ ಎಲ್ಲಾ ಸ್ಪರ್ಧಿಗಳಿಗೂ ಅಭಿನಂದನೆ ತಿಳಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ. ಅವ್ವೆರಹಳ್ಳಿ ವೆಂಕಟೇಶ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಸುಧಾ ರವಿಕುಮಾರ್,ಮಾಚೋಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ ಮಾಯಣ್ಣ, ನರಸಿಂಹಮೂರ್ತಿ, ಕೊಂಡೆಕೊಪ್ಪ ಗ್ರಾ. ಪಂ. ಅಧ್ಯಕ್ಷ ಎಂ. ಕುಸುಮ ಚಿಕ್ಕಣ್ಣ, ಉಪಾಧ್ಯಕ್ಷ ಎಸ್ಎನ್ ಜಗದೀಶ್, ಅವೆರಳ್ಳಿ ಅಪ್ಪಿ, ಭಾಗಿಯಾಗಿದ್ದರು.