ಚಾಮರಾಜನಗರ: ಬುಡಕಟ್ಟು ಸಮುದಾಯಗಳ ನಾಯಕರಾದ ಭಗವಾನ್ ಶ್ರೀ ಬಿರ್ಸಾಮುಂಡ ಅವರ ಜಯಂತಿ ಹಾಗೂ ಜನಜಾತೀಯ ಗೌರವ್ ದಿವಸ್ ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ಇಂದು ವಿವಿಧ ಕಲಾತಂಡಗಳೊಂದಿಗೆ ಬಿರ್ಸಾಮುಂಡ ಅವರ ಭಾವಚಿತ್ರದ ಆಕರ್ಷಕ ಮೆರವಣಿಗೆ ನಡೆಯಿತು.
ರಾಜ್ಯಮಟ್ಟದ ಬಿರ್ಸಾಮುಂಡಜಯಂತಿ ಕಾರ್ಯಕ್ರಮದ ಪ್ರಯುಕ್ತ ನಗರದ ಶ್ರೀಚಾಮ ರಾಜೇಶ್ವರ ದೇವಾಲಯದ ಅವರಣದಲ್ಲಿ
ಸಮಾವೇಶಗೊಂಡ ಮೆರವಣಿಗೆಗೆ ಶಾಸಕರಾದ ಸಿ. ಪುಟ್ಟರಂಗ ಶೆಟ್ಟಿ ಅವರು ಬಿರ್ಸಾಮುಂಡ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೆ. ಮಂಜುಳ, ಗಿರಿಜನ ಪ್ರಗತಿ ಫೌಂಡೇಷನ್ ಅಧ್ಯಕ್ಷರಾದ ಡಾ. ರತ್ನಮ್ಮ, ಗಿರಿಜನ ಮುಖಂಡರಾದ ಕೇತಮ್ಮ ಅವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಗೊರವರ ಕುಣಿತ, ಪಿನಾಸಿ ನೃತ್ಯ, ಡೊಳ್ಳು ಕುಣಿತ, ಬೊಂಬೆಗಳ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಬಿರ್ಸಾಮುಂಡ ಅವರ ಭಾವಚಿತ್ರದ ಮೆರವಣಿಗೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಆಕರ್ಷಣೆ ಹೆಚ್ಚಿಸಿದವು.
ಮೆರವಣಿಗೆಯು ಜಾನಪದ ಕಲಾತಂಡ ಗಳೊಂದಿಗೆ ಚಾಮರಾಜೇಶ್ವರ ದೇವಾಲಯದಿಂದ ಹೊರಟು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ವೇದಿಕೆ ಕಾರ್ಯಕ್ರಮ ಆಯೋಜನೆಯಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮುಕ್ತಾಯಗೊಂಡಿತು.
ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ವೇದಿಕೆ ಕಾರ್ಯಕ್ರಮದ ಬಳಿಕ ಹೊರ ಅವರಣದಲ್ಲಿ ಅಳವಡಿಸಿದ್ದ ಅರಣ್ಯ ಕಿರು ಉತ್ಪನ್ನ ಮಾರಾಟ ಮಳಿಗೆಗಳಲ್ಲಿ ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಹಾಗೂ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಜೇನು ಸೇರಿದಂತೆ ವಿವಿಧ ಅರಣ್ಯ ಕಿರು ಉತ್ಪನ್ನಗಳನ್ನು ಸ್ವತಹ ಖರೀದಿಸಿ ಪ್ರೋತ್ಸಾಹ ನೀಡಿದರು.