ಅಪ್ಪು ಯೂತ್ ಬ್ರಿಗೇಡ್ ವತಿಯಿಂದ ರಾಜ್ಯದಾದ್ಯಂತ ಕರುನಾಡಿನ ನೆಚ್ಚಿನ ಅಪ್ಪು, ದೊಡ್ಮನೆ ಹುಡುಗ, ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರ 49ನೇ ಹುಟ್ಟುಹಬ್ಬವನ್ನು ಶಾಲಾ ಮಕ್ಕಳು ಹಾಗೂ ಶಿಕ್ಷಕರೊಂದಿಗೆ ಸಂಭ್ರಮದಿಂದ ಆಚರಿಸಿದರು.
ಪುನೀತ್ ರಾಜಕುಮಾರ್ ಜನ್ಮದಿನಾಚರಣೆ ಅಂಗವಾಗಿ ಅಪ್ಪು ಯೂತ್ ಬ್ರಿಗೇಡ್ ನ ರಾಜ್ಯಾಧ್ಯಕ್ಷರಾದ ಮುರಳಿ ರವರು ಮತ್ತು ಅವರ ತಂಡ ಡಾ. ರಾಜಕುಮಾರ್ ವಾರ್ಡ್ ಮತ್ತು ಅಗ್ರಹಾರ ದಾಸರಹಳ್ಳಿ, ಬಸವೇಶ್ವರನಗರದ ಪಾಂಚಜನ್ಯ ವಿದ್ಯಾ ಪೀಠ ಮತ್ತು ಮಾರುತಿ ವಿದ್ಯಾ ಸಂಸ್ಥೆ ಮತ್ತಿತರ ಕನ್ನಡ ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದವರ ಸಮ್ಮುಖದಲ್ಲಿ 49ನೇ ಹುಟ್ಟು ಹಬ್ಬದ ಅಂಗವಾಗಿ ಅಪ್ಪು ರವರನ್ನು ಸ್ಮರಿಸಿ ಶಾಲಾ ಮಕ್ಕಳು ಬೃಹತ್ ಕೇಕ್ ಕತ್ತರಿಸಿ ಸಂಭ್ರಮಿಸಿದರು.
ನಂತರ ಶಾಲಾ ಮಕ್ಕಳಿಗೆ ನೋಟ್ಬುಕ್ ಗಳನ್ನು ಹಾಗೂ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು. ಅಪ್ಪು ರವರು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಪರಿಸರ ಉಳಿವಿನ ಕುರಿತು ಅರಿವು ಮೂಡಿಸಲು ಹಲವು ಬಾರಿ ಮನವಿ ಮಾಡಿರುವುದನ್ನು ಮನಗಂಡು ಪರಿಸರ ಉಳಿವಿಗಾಗಿ ಜಾಗೃತಿ ಮೂಡಿಸಲು ಶಾಲೆಯ ಶಿಕ್ಷಕರಿಗೆ ಗಿಡಗಳನ್ನು ವಿತರಿಸಲಾಯಿತು. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರ. ನರಸಿಂಹಮೂರ್ತಿ ಮಾತನಾಡಿದರು.
ಶಾಲೆಯ ಮುಖ್ಯ ಶಿಕ್ಷಕರು ಮಾತನಾಡಿ ಪುನೀತ್ ರಾಜಕುಮಾರ್ ರವರ ಮಾಡಿ ಹೋಗಿದ್ದ ಸೇವಾಕಾರ್ಯಗಳ ನೆನಪಿನಲ್ಲಿ ಅಪ್ಪು ಯುವ ಬ್ರಿಗೇಡ್ ವತಿಯಿಂದ ಸೇವಾಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು. ಈ ವೇಳೆ ಶಾಲೆಗಳ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ, ಸಮಾಜ ಸೇವಕರಾದ ಕೆ. ಕಣ್ಣಯ್ಯ, ಅಪ್ಪು ಯೂತ್ ಬ್ರಿಗೇಡ್ ನ ರಾಮಚಂದ್ರ, ಪ್ರಶಾಂತ್, ಉದಯ್, ರಾಹುಲ್, ರಾಮು ಮತ್ತಿತರರು ಹಾಜರಿದ್ದರು.